ಪಶ್ಚಿಮ ಘಟ್ಟದಲ್ಲಿ ಮಳೆ ಅಬ್ಬರ: ಹಬ್ಬಾನಟ್ಟಿ ಮಾರುತಿ ದೇವಸ್ಥಾನಕ್ಕೆ ನುಗ್ಗಿದ ನೀರು; ಅಂಬೋಲಿ ಫಾಲ್ಸ್ನಲ್ಲಿ ಪ್ರವಾಸಿಗರ ದಂಡು - ಈಟಿವಿ ಭಾರತ್ ಕನ್ನಡ ನ್ಯೂಸ್
ಬೆಳಗಾವಿ : ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಖಾನಾಪುರ ತಾಲೂಕಿನ ಕಣಕುಂಬಿ ಭಾಗದಲ್ಲಿ ಕಳೆದೆರಡು ದಿನದಲ್ಲಿ 160 ಮಿ.ಮೀ ಮಳೆ ಸುರಿದಿರುವ ಹಿನ್ನೆಲೆ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ. ಹೀಗಾಗಿ ಹಬ್ಬಾನಟ್ಟಿ ಗ್ರಾಮದ ಮಾರುತಿ ದೇವಸ್ಥಾನಕ್ಕೆ ನದಿ ನೀರು ನುಗ್ಗಿ ದೇವಸ್ಥಾನದ ಗರ್ಭಗುಡಿ ಸಂಪೂರ್ಣ ಮುಳುಗಡೆಯಾಗಿದೆ.
ಕ್ಷಣ ಕ್ಷಣಕ್ಕೂ ನದಿ ನೀರಿನ ಹರಿವಿನ ಪ್ರಮಾಣ ಏರಿಕೆಯಾಗುತ್ತಿದ್ದು, ಬಹುತೇಕ ದೇವಸ್ಥಾನ ಮುಳುಗಡೆ ಆಗುವ ಸಾಧ್ಯತೆಯಿದೆ. ದೇವಸ್ಥಾನ ಮೇಲ್ಬಾಗದಲ್ಲಿ ನಿಂತು ಪೂಜೆ ಪುನಸ್ಕಾರ ಮಾಡುತ್ತಿರುವ ಭಕ್ತರು ಮಾರುತಿ ದೇವರ ಜತೆಗೆ ನದಿಗೂ ಪೂಜೆ ಸಲ್ಲಿಸಿ ವಾಪಸ್ ಆಗುತ್ತಿದ್ದಾರೆ. ಮತ್ತೊಂದೆಡೆ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಹಾಲಿನ ನೊರೆಯಂತೆ ಅಂಬೋಲಿ ಫಾಲ್ಸ್ ಧುಮ್ಮಿಕ್ಕುತ್ತಿದೆ. ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನಲ್ಲಿರುವ ಅಂಬೋಲಿ ಪಾಲ್ಸ್ ಇದಾಗಿದ್ದು, ಬೆಳಗಾವಿ ಗಡಿಗೆ ಹೊಂದಿಕೊಂಡಿದೆ. ಬೆಳಗಾವಿ, ಮಹಾರಾಷ್ಟ್ರ ಮತ್ತು ಗೋವಾ ಭಾಗದಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಅಂಬೋಲಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಇದನ್ನೂ ಓದಿ :Jog Falls: ಮುಂಗಾರಿನಿಂದ ಜೋಗದಲ್ಲಿ ಜಲಸಿರಿ; ಪ್ರವಾಸಿಗರಿಗೆ ರಾಜಾ, ರಾಣಿ, ರೋರರ್, ರಾಕೆಟ್ ಮೋಡಿ