ಕಾವೇರಿ ತೀರ್ಥವನ್ನು ಹಣಕ್ಕೆ ಮಾರಾಟ ಮಾಡುವ ಇ-ಪ್ರಸಾದ ಯೋಜನೆ ಕೈ ಬಿಡುವಂತೆ ಒತ್ತಾಯ
ಕೊಡಗು :ಕಾವೇರಿ ತೀರ್ಥವನ್ನು ಹಣಕ್ಕೆ ಮಾರಾಟ ಮಾಡುವ "ಇ-ಪ್ರಸಾದ" ಯೋಜನೆ ಕಾವೇರಿ ತಾಯಿಯ ಮೂಲಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಈ ಯೋಜನೆಯನ್ನು ತಕ್ಷಣ ಕೈಬಿಡಬೇಕೆಂದು ತಲಕಾವೇರಿ ಮೂಲಸ್ವರೂಪ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಮಡಿಕೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ವೇದಿಕೆ ಸಂಚಾಲಕ ಉಳ್ಳಿಯದ ಎಂ. ಪೂವಯ್ಯ, ಭಾಗಮಂಡಲ ತಲಕಾವೇರಿ ಸೇರಿದ ಕಾವೇರಿ ಕ್ಷೇತ್ರವು ಪೌರಾಣಿಕ ಹಿನ್ನೆಲೆಯ ಪ್ರಾಕೃತಿಕ, ನೈಸರ್ಗಿಕ ತೀರ್ಥಯಾತ್ರಾ ಕೇಂದ್ರವಾಗಿದ್ದು, ದೈವಿಕ ವಿಗ್ರಹ, ದೈವಿಕ ರೂಪಾದಿಗಳಿಲ್ಲದೆ ಶುದ್ಧ ಜಲರೂಪದ ತೀರ್ಥವೇ ಶ್ರೀಕ್ಷೇತ್ರದ ಆರಾಧ್ಯ ದೇವತೆಯಾಗಿದ್ದಾಳೆ. ಇಂತಹ ಕಾವೇರಿಯನ್ನು ಪ್ರಸಾದವೆಂದು ಅಂಚೆ ಮೂಲಕ ವಿತರಣೆ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ತಮಿಳುನಾಡು ಸೇರಿದಂತೆ ಹೊರಗಿನ ದೂರದ ಮುಗ್ಧ ಕಾವೇರಿ ಭಕ್ತರು ಅನುಕೂಲ ಸೂತ್ರಕ್ಕೆ ಆಕರ್ಷಿತರಾಗಿ ಇ-ತೀರ್ಥ ಪ್ರಸಾದ ಯೋಜನೆಗೆ ಜೋತು ಬಿದ್ದರೆ. ಮುಂದೆ ಶ್ರೀಕ್ಷೇತ್ರಕ್ಕೆ ಭಕ್ತಬಲ, ಆದಾಯ ಬಲ, ನಾಮಬಲ, ಮಹಿಮಾಬಲ ಕ್ರಮೇಣವಾಗಿ ಕುಗ್ಗಲು ಪ್ರಾರಂಭ ಆಗಬಹುದು. ಯಾವುದೇ ಧಾರ್ಮಿಕ ಕ್ಷೇತ್ರಕ್ಕೆ ನೈಜಭಕ್ತರ ಬಲವೇ ಧಾರ್ಮಿಕ ಶಕ್ತಿ. ಈ ಹಿನ್ನೆಲೆಯಲ್ಲಿ ಕಾಲಾನುಕಾಲದಲ್ಲಿ ನೈಜಭಕ್ತರ ಆಗಮನ ಕ್ಷೀಣಿಸಿದರೆ ಕ್ಷೇತ್ರ ಮಹತ್ವಕ್ಕೆ ಹೊಡೆತ ಬೀಳಬಹುದು ಎಂದು ಎಂ. ಪೂವಯ್ಯ ಆತಂಕ ವ್ಯಕ್ತಪಡಿಸಿದರು.
ನೈಸರ್ಗಿಕವಾದ ಕಾವೇರಿ ತೀರ್ಥವನ್ನು ಹಣಕ್ಕೆ ಮಾರಾಟ ಮಾಡುವ ಸಾಂಪ್ರದಾಯ ಕಾವೇರಿ ಕ್ಷೇತ್ರದಲ್ಲಿ ಹಿಂದಿನಿಂದಲೂ ಇಲ್ಲ. ಅಲ್ಲದೆ ಇತರೆಡೆಗಳಲ್ಲಿ ಇರುವಂತೆ `ಪಂಚಕಜ್ಜಾಯ ಪ್ರಸಾದ" ಕಾವೇರಿ ಕ್ಷೇತ್ರದ ವಿಶೇಷತೆಯೂ ಅಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಮಾಧ್ಯಮಗೋಷ್ಟಿಯಲ್ಲಿ ವೇದಿಕೆಯ ಸದಸ್ಯರಾದ ಕಿರಿಯಮಾಡ ರತನ್ ತಮ್ಮಯ್ಯ, ಪುಡಿಯಂಡ ಕೆ.ಮುತ್ತಣ್ಣ, ಉಳ್ಳಿಯದ ಡಾಟಿ ಪೂವಯ್ಯ ಉಪಸ್ಥಿತರಿದ್ದರು.
ಇದನ್ನೂ ಓದಿ :ಅಬ್ಬಿ ಜಲಪಾತ ಪ್ರವೇಶ ದ್ವಾರ ಶುಲ್ಕಕ್ಕೆ ಮಾಲೀಕರಿಂದ ವಿರೋಧ