ಹೊಸಪೇಟೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ: ಮೃತರ ಸಂಬಂಧಿಕರಿಗೆ ಸಚಿವ ಜಮೀರ್ ಸಾಂತ್ವನ
ಬಳ್ಳಾರಿ: ಹೊಸಪೇಟೆ ವಡ್ಡರಹಳ್ಳಿಯ ರೈಲ್ವೆ ಸೇತುವೆ ಬಳಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಹೀರ್ (10) ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 9ಕ್ಕೆ ತಲುಪಿದೆ. ಶುಕ್ರವಾರ ಸಂಜೆ ರೈಲ್ವೆ ಸೇತುವೆ ಬಳಿ ಎರಡು ಆಟೋ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿತ್ತು. ನಿನ್ನೆ 8 ಜನ ಮೃತಪಟ್ಟರೆ ಒಂದು ಮತ್ತೊಬ್ಬರು ಅಸುನೀಗಿದ್ದಾರೆ. ಯಾಸ್ಮೀನ್ (45), ಸಲೀಮಾ (40), ಉಮೇಶ್ (27), ಜಹೀರ್ (16), ಸಪ್ರಾಬಿ (55), ಕೌಸರ್ ಬಾನು (35), ಇಬ್ರಾಹಿಂ (33) ಹಾಗೂ ಸಹಿರಾ (25) ನಿನ್ನೆ ಮೃತಪಟ್ಟಿದ್ದರೆ ಇಂದು ತಾಹೀರ್ (10) ಎಂಬ ಬಾಲಕ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ. ದುರಂತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಬಳ್ಳಾರಿಯ ವಿಮ್ಸ್ ಶವಗಾರಕ್ಕೆ ಭೇಟಿ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ರಸ್ತೆ ಅಪಘಾತ ನಿಜಕ್ಕೂ ನೋವು ತಂದಿದೆ. ಮುಖ್ಯಮಂತ್ರಿಗಳು ಈಗಾಗಲೇ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೇ ಗಾಯಾಳುಗಳ ಚಿಕಿತ್ಸೆಗೆ ತಲಾ 50 ಘೋಷಣೆ ಮಾಡಿದ್ದಾರೆ. ಸಿಎಂ ಬಳಿ ಚರ್ಚಿಸಿ ಹೆಚ್ಚುವರಿ ಪರಿಹಾರ ಕೊಡಿಸಲು ಪ್ರಯತ್ನ ಮಾಡಲಾಗುವುದು. ಜೊತೆಗೆ ಅಲ್ಪಸಂಖ್ಯಾತ ಇಲಾಖೆಯಿಂದ ಕೂಡ ತಲಾ ಒಂದು ಲಕ್ಷ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡುವೆ ಎಂದಿದ್ದಾರೆ. ಶಾಸಕರಾದ ನಾರಾಭರತ್ ರೆಡ್ಡಿ, ಹೆಚ್ ಆರ್ ಗವಿಯಪ್ಪ, ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ ಈ ವೇಳೆ, ಹಾಜರಿದ್ದರು.
ಇದನ್ನೂ ಓದಿ:ಹೊಸಪೇಟೆ ಸಮೀಪ ಭೀಕರ ರಸ್ತೆ ಅಪಘಾತ: 8 ಜನರು ಸಾವು