ವಿಧಾನಸೌಧ ಮುಂಭಾಗ ಗೋಮೂತ್ರ ಸಿಂಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು- ವಿಡಿಯೋ
ಬೆಂಗಳೂರು: ಇಂದಿನಿಂದ ಮೂರು ದಿನಗಳ ಕಾಲ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧದ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ ಪೂಜೆ ಸಲ್ಲಿಸಿದರು. ಪ್ರವೇಶ ದ್ವಾರ ಹಾಗೂ ಹೊರ ಆವರಣದಲ್ಲಿ ಗಂಜಲ ಸಿಂಪಡಿಸಿ ಶುದ್ಧೀಕರಣ ಮಾಡಿ, ವೈದಿಕರ ಮೂಲಕ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, "ಹಿಂದಿನ ಭ್ರಷ್ಟ ಬಿಜೆಪಿ ಸರ್ಕಾರ ರಾಜ್ಯದಿಂದ ತೊಲಗಿ ಶುದ್ಧ ಆಡಳಿತ ನಡೆಸಲು ಕಾಂಗ್ರೆಸ್ ಪಕ್ಷಕ್ಕೆ ಜನ ಸ್ಪಷ್ಟ ಬಹುಮತ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ಒಳಿತಿಗಾಗಿ ಶಕ್ತಿ ಕೇಂದ್ರ ವಿಧಾನಸೌಧದ ಮುಂಭಾಗದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು" ಎಂದು ತಿಳಿಸಿದರು.
ಇನ್ನೊಂದೆಡೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್. ಅಶೋಕ್, ಮಾಜಿ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದರು.
ವಿಧಾನಸೌಧದ ಸುತ್ತಮುತ್ತ 2 ಕಿ ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೆರವಣಿಗೆ, ಧರಣಿ ಸತ್ಯಾಗ್ರಹ, ಪ್ರತಿಭಟನೆ ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇರುವುದರಿಂದ ಅಧಿವೇಶನದ ಕಾರ್ಯ-ಕಲಾಪಗಳಿಗೆ ಅಡಚಣೆ ಉಂಟಾಗದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಾಗೆಯೇ, ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆ ಅವರ ಸಮ್ಮುಖದಲ್ಲಿ ಇಂದು ಎಲ್ಲ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ :ಮೂರು ದಿನಗಳ ಕಾಲ ವಿಧಾನಸಭೆಯ ವಿಶೇಷ ಅಧಿವೇಶನ.. 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ