ಶಿವಮೊಗ್ಗ: ಕೋರ್ಟ್ ಆದೇಶದ ಮೇರೆಗೆ ಸರ್ಕಾರಿ ಕಚೇರಿಯ ಪೀಠೋಪಕರಣ ಜಪ್ತಿ
ಶಿವಮೊಗ್ಗ: ಭೂಮಿ ಕಳೆದುಕೊಂಡ ರೈತನಿಗೆ ಪರಿಹಾರ ನೀಡದೇ ಸತಾಯಿಸುತ್ತಿದ್ದ ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧೀನಾಧಿಕಾರಿ ಕಾರ್ಯಾಲಯದ ಪೀಠೋಪಕರಣ ಹಾಗೂ ಕಂಪ್ಯೂಟರ್‌ಗಳನ್ನು ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಲಾಯಿತು.
ಗಾಡಿಕೊಪ್ಪದ ವೆಂಕಟೇಶ್ ಎಂಬುವರ ಅನುಪಿನಕಟ್ಟೆ ಸರ್ವೆ ನಂಬರ್ 75ರಲ್ಲಿನ 5.19 ಎಕರೆ ಜಮೀನನ್ನು ತುಂಗಾ ಮೇಲ್ದಂಡೆ ಯೋಜನೆಗಾಗಿ 1997ರಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಅಂದು ಪ್ರತಿ ಎಕರೆಗೆ 3 ಲಕ್ಷದಂತೆ ಪರಿಹಾರ ನೀಡಲಾಗಿದ್ದು, ನಂತರ ಹೆಚ್ಚಿನ ಪರಿಹಾರಕ್ಕಾಗಿ ವೆಂಕಟೇಶ್ರವರು ನ್ಯಾಯಾಲಯದ ಮೊರೆ ಹೋಗಿದ್ದರು.
ಪರಿಹಾರದ ಮೊತ್ತ ಹೆಚ್ಚಿಸಿದ್ದ ನ್ಯಾಯಾಲಯ 2.45 ಕೋಟಿ ರೂ. ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದರೆ ಇದುವರೆಗೂ ಪರಿಹಾರವನ್ನು ನೀಡದ ಹಿನ್ನೆಲೆಯಲ್ಲಿ ಜಮೀನು ಮಾಲೀಕ ವೆಂಕಟೇಶ್ ಪುನಃ ನ್ಯಾಯಾಲಯದ ಮೆಟ್ಟಿಲೆರಿದ್ದರು. ಇದನ್ನು ವಿಚಾರಣೆ ನಡೆಸಿದ ನ್ಯಾಯಾಲಯ 19 ಕೋಟಿ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಆಗಲೂ ಪರಿಹಾರ ನೀಡದಿದ್ದರಿಂದ ನ್ಯಾಯಾಲಯ ಭೂ ಸ್ವಾಧೀನಾಧಿಕಾರಿ ಕಚೇರಿಯ ಪೀಠೋಪಕರಣ ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡುವಂತೆ ಆದೇಶ ನೀಡಿದೆ. ಇದರಿಂದಾಗಿ ನ್ಯಾಯಾಲಯದ ಅಮೀನರ ನೆರವಿನೊಂದಿಗೆ 5 ಕಂಪ್ಯೂಟರ್, 5 ಖುರ್ಚಿ, 2 ಟೇಬಲ್ ಸೇರಿದಂತೆ ಸುಮಾರು 1ಲಕ್ಷ ರೂ. ವೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ:ಶಿವಲಿಂಗಕ್ಕೆ ಜೀವಂತ ಏಡಿಗಳನ್ನು ಅರ್ಪಿಸುವ ಭಕ್ತರು.. ಕಾರಣ ಏನು ?