ಜೂ.11 ರಿಂದ ಬಸ್ ಪ್ರಯಾಣ ಫ್ರೀ..ಫ್ರೀ.. ನನ್ನ ಹೆಂಡತಿಗೂ ಉಚಿತ, ರಾಜ್ಯದ ಮುಖ್ಯ ಕಾರ್ಯದರ್ಶಿಗೂ ಉಚಿತ ಎಂದ ಸಿಎಂ
ಬೆಂಗಳೂರು: ನಾಲ್ಕನೇ ಗ್ಯಾರಂಟಿ ಶಕ್ತಿ ಯೋಜನೆಯನ್ನು ಎಲ್ಲ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ಜೂ.11 ರಂದು ಜಾರಿಗೊಳಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ನನ್ನ ಹೆಂಡ್ತಿಗೂ ಫ್ರೀ : ಬಸ್ ಪ್ರಯಾಣ "ನನ್ನ ಹೆಂಡ್ತಿಗೂ ಫ್ರೀ". ಹೀಗೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸ್ಯ ಚಟಾಕಿ ಹಾರಿಸಿದರು.
ರಾಜಹಂಸನೂ ಫ್ರೀ ಕೊಟ್ಟುಬಿಡ್ರಿ : ಉಚಿತ ಬಸ್ ಪ್ರಯಾಣದ ವಿವರ ನೀಡುತ್ತಿದ್ದ ಮುಖ್ಯಮಂತ್ರಿಗಳು ಬಾಯಿತಪ್ಪಿ " ರಾಜಹಂಸ ಬಸ್ ಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದು" ಅಂದು ಬಿಟ್ಟರು. ಗಾಭರಿ ಬಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು "ರಾಜಹಂಸ ಉಚಿತ ಅಲ್ಲ" ಎಂದು ನೆನಪಿಸಿದರು. ಈ ವೇಳೆ ಮುಖ್ಯಮಂತ್ರಿಗಳು, "ರಾಜಹಂಸದಲ್ಲೂ ಉಚಿತವಾಗಿ ಓಡಾಡಲಿ ಬಿಡ್ರಿ" ಎಂದರು. ಇದಕ್ಕೆ ಉತ್ತರಿಸಿದ ಸಚಿವರು, "ಎಲ್ಲರೂ ರಾಜಹಂಸಕ್ಕೆ ನುಗ್ತಾರೆ. ಉಳಿದ ಬಸ್ ಗಳನ್ನು ಹತ್ತುವುದಿಲ್ಲ" ಎಂದರು.
ಶೇ 94 ರಷ್ಟು ಉಚಿತ : ಐಷಾರಾಮಿ ಮತ್ತು ಎಸಿ ಹಾಗೂ ಸ್ಲೀಪಿಂಗ್ ಬಸ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಸ್ ಗಳಲ್ಲೂ ಮಹಿಳೆಯರು ಉಚಿತವಾಗಿ ಓಡಾಡಲು ಅವಕಾಶ ಕೊಟ್ಟಿರುವುದರಿಂದ ಶೇ 94 ರಷ್ಟು ಬಸ್ ಗಳಲ್ಲಿ ಉಚಿತ ಅನುಕೂಲ ಒದಗಿಸಿದಂತಾಗಿದೆ ಎಂದು ಹೇಳಿದರು.
ಈ ಬಸ್ ಸೇವೆ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ರಾಜ್ಯದ ಒಳಗೆ ಮಾತ್ರ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು. ಎಸಿ, ನಾನ್ ಎಸಿ ಸ್ಲೀಪರ್ ಬಸ್ ಬಿಟ್ಟು, ಎಕ್ಸ್‌ಪ್ರೆಸ್ ಬಸ್ ಮತ್ತು ಇತರ ಬಸ್ಗಳಲ್ಲಿ ಪ್ರಯಾಣ ಮಾಡಬಹುದು. ಆದರೆ ಬೆಂಗಳೂರಿನಿಂದ ತಿರುಪತಿ, ಹೈದರಾಬಾದ್ಗೆ ಹೋಗುತ್ತೇನೆ ಎಂದರೇ ಅವಕಾಶ ಇಲ್ಲ, ರಾಜ್ಯದ ಒಳಗೆ ಮತ್ತು ಕರ್ನಾಟಕದ ಮಹಿಳೆಯರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ನಲ್ಲಿ ಅವಕಾಶ ಇದೆ ಇದರಿಂದ ಶೇ 94 % ರಷ್ಟು ಬಸ್ ವ್ಯವಸ್ಥೆ ಮಹಿಳೆಯರಿಗೆ ಸಿಗಲಿದೆ ಎಂದು ಹೇಳಿದರು.
ಕೆಸ್ಆರ್ಟಿಸಿನಲ್ಲಿ ಶೇ 50% ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿರಿಸಲಾಗುತ್ತದೆ. ಯೋಜನೆ ಅಡಿಯಲ್ಲಿ ಎಲ್ಲ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ. ವಿದ್ಯಾರ್ಥಿನಿಯರು ಸೇರಿ ಎಲ್ಲಾ ಮಹಿಳೆಯರಿಗೆ ‘ಶಕ್ತಿ’ ಯೋಜನೆ ಅನ್ವಯವಾಗಲಿದೆ.