ಸಚಿವ ವೆಂಕಟೇಶ್ ಹೇಳಿಕೆಗೆ ಖಂಡನೆ: ಗೋವುಗಳೊಂದಿಗೆ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಬೆಂಗಳೂರು:ಎಮ್ಮೆಗಳನ್ನು ಕಡಿಯುವುದಾದರೆ ಹಸುಗಳನ್ನು ಏಕೆ ಕಡಿಯಬಾರದು? ಎಂಬ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿಕೆಯನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಇಂದು ಬೆಂಗಳೂರಿನಲ್ಲಿ ಗೋವುಗಳೊಂದಿಗೆ ಪ್ರತಿಭಟನೆ ನಡೆಸಿದರು. ಗೋಹತ್ಯೆ ತಡೆ ಕಾಯ್ದೆ ಎಂದು ಕರೆಯಲ್ಪಡುವ ಕರ್ನಾಟಕ ಗೋಹತ್ಯೆ ತಡೆ ಮತ್ತು ಗೋಸಂರಕ್ಷಣಾ ಕಾಯ್ದೆಯನ್ನು ಉಲ್ಲೇಖಿಸಿದ ಸಚಿವ ವೆಂಕಟೇಶ್, ಸರ್ಕಾರವು ಕಾನೂನನ್ನು ಮರುಪರಿಶೀಲಿಸಲಿದೆ ಎಂದು ಶನಿವಾರ ಮೈಸೂರಿನಲ್ಲಿ ಹೇಳಿದ್ದರು.
ಹಿಂದಿನ ಬಿಜೆಪಿ ಸರ್ಕಾರ ಎಮ್ಮೆಗಳ ಹತ್ಯೆಗೆ ಅವಕಾಶ ನೀಡುವ ಕಾನೂನನ್ನು ಜಾರಿಗೆ ತಂದಿದೆ. ಆದರೆ ಗೋವುಗಳನ್ನು ಅಲ್ಲ ಎಂಬುದು ಅವರ ವಾದವಾಗಿತ್ತು. ವೆಂಕಟೇಶ್ ಅವರ ಮಾತನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ಈ ಬಗ್ಗೆ ಚರ್ಚೆ ನಡೆಸಲಿದೆ ಎಂದು ದಾವಣಗೆರೆಯಲ್ಲಿ ತಿಳಿಸಿದ್ದರು. ಈಗಾಗಲೇ ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964 ಇತ್ತು. ಆದರೆ ಮತ್ತೆ ಅದೇ ಕಾನೂನಿಗೆ 2012 ರಲ್ಲಿ ಬಿಜೆಪಿ ಸರ್ಕಾರ ತಿದ್ದುಪಡಿ ತಂದಿತ್ತು. ಈ ಬಗ್ಗೆ ಸಂಪುಟದಲ್ಲಿ ಚರ್ಚಿಸುತ್ತೇವೆ. ನಾವು ಇನ್ನೂ ಯಾವುದನ್ನೂ ನಿರ್ಧರಿಸಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ:ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ