ದ್ವಿಚಕ್ರ ವಾಹನದ ಸೈಲೆನ್ಸರ್ ತೆಗೆಸಿ ಸವಾರರಿಗೆ ಪೊಲೀಸರಿಂದ ಕ್ಲಾಸ್ - ಹೋಟೆಲ್ ಮಾಲೀಕರಿಗೂ ಎಚ್ಚರಿಕೆ
ದಾವಣಗೆರೆ :ಜಿಲ್ಲೆಯ ಹರಿಹರ ನಗರ ಠಾಣೆಯ ಪೊಲೀಸರು ವಾಹನ ಸವಾರರಿಗೆ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕರ್ಕಶ ಶಬ್ದ ಮಾಡುವ ರಾಯಲ್ ಎನ್ಫೀಲ್ಡ್ ದ್ವಿಚಕ್ರ ವಾಹನದ ಸೈಲೆನ್ಸರ್ ತೆಗೆಸಿ, ಟೈರ್ನ ಗಾಳಿ ತೆಗೆದು ವಾಹನ ಸವಾರರಿಗೆ ಹರಿಹರದ ಪೊಲೀಸರು ಪಾಠ ಕಲಿಸಿದ್ದಾರೆ.
ಈ ಹಿಂದೆ ಹರಿಹರ ನಗರದಲ್ಲಿ ಕರ್ಕಶ ಶಬ್ದ ಮಾಡುವ ಸೈಲೆನ್ಸರ್ಗಳನ್ನು ತೆರವು ಮಾಡುವಂತೆ ವಾಹನ ಸವಾರರಿಗೆ ಸೂಚಿಸಲಾಗಿತ್ತು. ಪೊಲೀಸರ ಸೂಚನೆಯನ್ನು ಲೆಕ್ಕಿಸದೇ ಸಾರ್ವಜನಿಕರಿಗೆ ತೊಂದರೆಕೊಡುತ್ತಿದ್ದ ವಾಹನ ಸವಾರರಿಗೆ ಪಾಠ ಕಲಿಸುವ ಉದ್ದೇಶದಿಂದ ಬೈಕ್ ಸೈಲೆನ್ಸರ್ಗಳನ್ನು ತೆಗೆಸಿದ್ದಾರೆ.
ಇದಲ್ಲದೇ ಹರಿಹರ ನಗರದಾದ್ಯಂತ ಸಂಚಾರಿ ನಿಯಮ ಪಾಲಿಸದೆ ದ್ವಿಚಕ್ರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ವಾಹನ ಸವಾರರು ಹೋಗ್ತಿದ್ದರು. ಇದರಿಂದ ಅನಾವಶ್ಯಕವಾಗಿ ಟ್ರಾಫಿಕ್ ಜಾಮ್ ಆಗಿ ಜನಸಾಮಾನ್ಯರಿಗೆ ತೊಂದರೆ ಆಗ್ತಿತ್ತು. ಇದನ್ನು ಗಮನಿಸಿದ ಹರಿಹರ ಸಂಚಾರಿ ಪೊಲೀಸರು ರಸ್ತೆ ಮಧ್ಯೆ ನಿಲ್ಲಿಸಿದ್ದ ಬೈಕ್ಗಳ ಚಕ್ರದ ಗಾಳಿ ತೆಗೆದು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ. ವಾಹನ ಸವಾರರು ಹರಿಹರ ಪಟ್ಟಣದಲ್ಲಿ ಪೊಲೀಸರಿಗೆ ಕ್ಯಾರೆ ಅನ್ನದೆ ಇರುವುದರಿಂದ ಪೊಲೀಸರು ಎಚ್ಚರಿಕೆ ನೀಡಿ ಸುಸ್ತಾಗಿ ಈ ಕ್ರಮ ಕೈಗೊಂಡಿದ್ದಾರೆ. ಬೈಕ್ ವಿಚಾರವಾಗಿ ಅಂಗಡಿ ಮುಂಗಟ್ಟುಗಳು ಸೇರಿ ಹೋಟೆಲ್ ಮಾಲೀಕರಿಗೂ ಎಚ್ಚರಿಕೆ ನೀಡಿದ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ರಿಯಾಯಿತಿಯಲ್ಲಿ ಸಂಚಾರಿ ದಂಡ ಪಾವತಿಗೆ ಇಂದು ಅಂತಿಮ ದಿನ: ಭರ್ಜರಿ ದಂಡ ಸಂಗ್ರಹಣೆ ನಿರೀಕ್ಷೆ