ಮಂಡ್ಯ: ಬಿ.ವೈ.ವಿಜಯೇಂದ್ರಗೆ ಅಭಿಮಾನಿಯಿಂದ ಸ್ಪೆಷಲ್ ಗಿಫ್ಟ್ - ಹಳ್ಳಿಕಾರ್ ತಳಿಯ ಹೋರಿ ಉಡುಗೊರೆ
ಮಂಡ್ಯ:ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಾಚಹಳ್ಳಿ ಗ್ರಾಮದಲ್ಲಿಂದು ನಡೆದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗಿಯಾದರು. ಈ ವೇಳೆ ಅಭಿಮಾನಿ ಸ್ವಾಮಿ ಎಂಬಾತ ಅಂದಾಜು 50 ಸಾವಿರ ಬೆಲೆಯ ಹಳ್ಳಿಕಾರ್ ತಳಿಯ ಹೋರಿಯೊಂದನ್ನು ಉಡುಗೊರೆಯಾಗಿ ನೀಡಿದರು. ಇದಕ್ಕೂ ಮೊದಲು ಹೊಳಲು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೇಂದ್ರರನ್ನು ಸ್ವಾಗತಿಸಿ, ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಘೋಷಣೆ ಕೂಗಿದರು.
"ಕಾಂಗ್ರೆಸ್, ಜೆಡಿಎಸ್ ಬಗ್ಗೆ ಮಂಡ್ಯ ಜಿಲ್ಲೆಯ ಜನರು ಬೇಸತ್ತಿದ್ದಾರೆ. ಬಿಜೆಪಿ ಪರ ಭರವಸೆ ಜನರಿಂದ ವ್ಯಕ್ತವಾಗುತ್ತಿದೆ. ಕೆ.ಆರ್.ಪೇಟೆ ಗೆಲುವು ಮುಂದಿನ ವಿಧಾನಸಭೆ ಗೆಲ್ಲಲು ಪ್ರೇರಣೆಯಾಗಿದೆ. ಪಕ್ಷ ನನಗೆ ಯಾವುದೇ ಜಿಲ್ಲೆಯ ಉಸ್ತುವಾರಿ ಕೊಟ್ರೂ ನಿಭಾಯಿಸುತ್ತೇನೆ" ಎಂದು ವಿಜಯೇಂದ್ರ ಹೇಳಿದರು.
ಶಿವಕುಮಾರ ಸ್ವಾಮೀಜಿಯವರ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಚಿವ ಕೆ.ಸಿ.ನಾರಾಯಣ ಗೌಡ ಭಾಷಣದುದ್ದಕ್ಕೂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. "ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ ಅಂತ ಜೆಡಿಎಸ್ ತೊರೆದು ನಾನು ಬಿಜೆಪಿ ಜೊತೆ ಸೇರಿದೆ. ನನ್ನನ್ನು ಗೆಲ್ಲಿಸಲು 2 ತಿಂಗಳು ವಿಜಯೇಂದ್ರ ಶ್ರಮಿಸಿದ್ದರು. ಈ ಹಿಂದೆ 2 ಚುನಾವಣೆ ಎದುರಿಸಿದ್ದೆ. ಅದರಲ್ಲಿ ಏಳೇಳು ಕೆ.ಜಿ ಕರಗಿದ್ದೆ. ಬಿಜೆಪಿಯಿಂದ ಚುನಾವಣೆ ಎದುರಿಸಿದಾಗ 2 ಕೆಜಿ ಕೂಡಾ ಕರಗಲಿಲ್ಲ. ತಂದೆಗೆ ತಕ್ಕ ಪುತ್ರ ಅಂದ್ರೆ ಅದು ವಿಜಯೇಂದ್ರ" ಎಂದರು. "ಯಡಿಯೂರಪ್ಪ ಶ್ರಮಜೀವಿ. ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಕೆಲಸ ಮಾಡ್ತಾರೆ" ಎಂದರು.
ಇದನ್ನೂ ಓದಿ:ಬೆಳಗಾವಿಗೂ ಬರ್ತಾರೆ ಪ್ರಧಾನಿ ಮೋದಿ.. ರಾಜ್ಯಾದ್ಯಂತ ಬಿಜೆಪಿ ಪ್ರಗತಿ ರಥ ಯಾತ್ರೆ