ಬಿಜೆಪಿ ಗೋಡೆ ಬರಹ ಅಭಿಯಾನಕ್ಕೆ ಅಮಿತ್ ಶಾ ಚಾಲನೆ.. ರೋಡ್ ಶೋನಲ್ಲಿ ಕಾಂಗ್ರೆಸ್ ಜೆಡಿಎಸ್ ವಿರುದ್ಧ ವಾಗ್ದಾಳಿ - ಬಿಜೆಪಿ ಗೋಡೆ ಬರಹ ಅಭಿಯಾನ
ಹುಬ್ಬಳ್ಳಿ:ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಕುಂದಗೋಳ ಪಟ್ಟಣದಲ್ಲಿ ಅದ್ದೂರಿಯಾಗಿ ರೋಡ್ ಶೋ ನಡೆಸಿ, ನಂತರ ಮನೆಯ ಗೋಡೆಯ ಮೇಲೆ ಬಿಡಿಸಲಾಗಿದ್ದ ಬಿಜೆಪಿಯ ಗುರುತಿನ ಚಿಹ್ನೆ ಕಮಲದ ಹೂವಿಗೆ ಬಣ್ಣ ಬಳೆಯುವ ಮೂಲಕ 'ಬಿಜೆಪಿ ಗೋಡೆ ಬರಹ ಅಭಿಯಾನ'ಕ್ಕೆ ಚಾಲನೆ ನೀಡಿದರು. ಪಟ್ಟಣದ ಬಸವರಾಜ್ ಹಂಚಿನಮನಿ ಅವರಿಗೆ ಸೇರಿದ ಮನೆಯ ಗೋಡೆ ಮೇಲೆ ತೆಗೆಯಲಾಗಿದ್ದ ಕಮಲ ಚಿತ್ರಕ್ಕೆ ಕೇಸರಿ ಬಣ್ಣ ಬಳಿದರು. ಬಳಿಕ ಅಮಿತ್ ಶಾ ಅವರಿಗೆ ಮಾಲೆ ಹಾಕಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಳೀನಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಇನ್ನು ರೋಡ್ ಶೋ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿರುವ ಶಾ, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಕರ್ನಾಟಕವನ್ನು ಅವರ ನಾಯಕರು ಎಟಿಎಮ್ ಮಾಡಿಕೊಂಡಿದ್ದರು. ಜೆಡಿಎಸ್ ಕಾಂಗ್ರೆಸ್ ಈ ರಾಜ್ಯವನ್ನು ಲೂಟಿ ಹೊಡೆದಿವೆ. ಜೆಡಿಎಸ್ ಕುಟುಂಬ ರಾಜಕಾರಣದಿಂದ ರಾಜ್ಯ ನಲುಗಿದೆ. ಇದೆಲ್ಲವನ್ನು ತಡೆಯಲು ಬಿಜೆಪಿಯೊಂದೇ ಪರಿಹಾರ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಶಾ ಕರೆ ನೀಡಿದರು.
ದೇಶದಲ್ಲಿ ಭಯೋತ್ಪಾದನೆ ಮಟ್ಟಹಾಕಿದ್ದೇವೆ, ಕಾಶ್ಮೀರದ ಆರ್ಟಿಕಲ್ 370 ರದ್ದುಪಡಿಸಲಾಗಿದೆ, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿದೆ. ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಇದೆ ವೇಳೆ ಅಮಿತ್ ಹೇಳಿದರು.