ಹಿಡಕಲ್ ಡ್ಯಾಂನಲ್ಲಿ ಬತ್ತಿದ ನೀರು: 12 ವರ್ಷಗಳ ಬಳಿಕ ವಿಠ್ಠಲನ ದರ್ಶನಭಾಗ್ಯ- ವಿಡಿಯೋ
ಚಿಕ್ಕೋಡಿ (ಬೆಳಗಾವಿ): ಜೂನ್ ತಿಂಗಳು ಬಂತೆಂದರೆ ಸಾಕು, ಮಳೆ ಕೂಡ ಪ್ರಾರಂಭವಾಗುತ್ತಿತ್ತು. ಆದರೆ ಈ ಬಾರಿ ಜೂನ್ ಮುಗಿದು, ಜುಲೈ ಬಂದ್ರೂ ಮಳೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದರ ಪರಿಣಾಮವಾಗಿ ಜಿಲ್ಲೆಯಲ್ಲಿನ ಬಹುತೇಕ ನದಿಗಳು ಬತ್ತಿ ಹೋಗಿವೆ. ಉತ್ತರ ಕರ್ನಾಟಕದ ಅನೇಕ ಡ್ಯಾಂಗಳು ನೀರಿಲ್ಲದೇ, ಬರೀ ಕಲ್ಲಾಗಿವೆ. ಹೀಗಾಗಿಯೇ, 12 ವರ್ಷಗಳ ನಂತರ ಪುರಾತನ ದೇವಸ್ಥಾನವೊಂದು ದರ್ಶನಕ್ಕೆ ಮುಕ್ತವಾಗಿದೆ.
ಹೌದು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂನಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗುತ್ತಿದ್ದಂತೆ, ಡ್ಯಾಂನ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ಪುರಾತನ ವಿಠ್ಠಲ ದೇವಸ್ಥಾನವು ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತಿದೆ. ಆಷಾಢ ಏಕದಶಿಯಂದೇ ಜನರು ವಿಠ್ಠಲನ ದರ್ಶನ ಪಡೆದಿದ್ದಾರೆ.
ಈ ದೇವಸ್ಥಾನವನ್ನು 1928ರಲ್ಲಿ ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣ ಮಾಡಲಾಗಿದೆ. 1977ನೇ ಇಸವಿಯಲ್ಲಿ ಹಿಡಕಲ್ ಡ್ಯಾಂ ನಿರ್ಮಾಣದಿಂದ ವಿಠ್ಠಲ ದೇವಸ್ಥಾನವು ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ವರ್ಷದ 10 ತಿಂಗಳು ಕೂಡ ಸಂಪೂರ್ಣ ಮುಳುಗಡೆಯಾಗುವ ಈ ದೇವಸ್ಥಾನ, ಕೇವಲ 2 ತಿಂಗಳಷ್ಟೇ ಅರ್ಧದಷ್ಟು ದರ್ಶನ ಕೊಡುತ್ತಿತ್ತು.
ಇದೀಗ 12 ವರ್ಷಗಳ ನಂತರ ಹಿಡಕಲ್ ಡ್ಯಾಂನಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿರುವುದರಿಂದ, ಭಕ್ತರಿಗೆ ವಿಠ್ಠಲನ ದರ್ಶನಕ್ಕೆ ಅವಕಾಶ ಸಿಕ್ಕಿದೆ. ಇಷ್ಟು ವರ್ಷ ದೇವಾಲಯವೂ ನೀರಿನಲ್ಲಿ ಮುಳುಗಿದ್ದರೂ ಕೂಡ, ಒಂದು ಸಣ್ಣ ಹಾನಿಯಾಗದೇ ಇರುವುದು ವಿಶೇಷ.
ಇದನ್ನೂ ಓದಿ:ನಿರ್ಮಾಣ ಹಂತದಲ್ಲಿರುವ ಅಯೋಧ್ಯೆಯ ಶ್ರೀರಾಮಮಂದಿರ ಹೇಗಿದೆ ಗೊತ್ತೇ?: ವಿಡಿಯೋ ನೋಡಿ..