ಸೊಂಡಿಲಿನಲ್ಲಿ ಸೊಪ್ಪು ತಿನ್ನುತ್ತ ರಾಜ ಗಾಂಭೀರ್ಯದಿಂದ ಶಿರಾಡಿ ಹೆದ್ದಾರಿ ದಾಟಿದ ಕಾಡಾನೆ - ಶಿರಾಡಿ
Published : Jan 9, 2024, 7:35 AM IST
ಶಿರಾಡಿ (ದಕ್ಷಿಣ ಕನ್ನಡ):ಈಗೀಗ ಕಡಬ, ಸುಳ್ಯ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ದಿನಂಪ್ರತಿ ಕಾಡಾನೆಗಳು ಕಾಣ ಸಿಗುವುದು ಸಾಮಾನ್ಯವಾಗಿದೆ. ವಾಹನಗಳ ಸಂಚಾರವಿರುವ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಕಾಡಾನೆಯೊಂದು ತನ್ನ ಸೊಂಡಿಲಿನಲ್ಲಿ ರಾಜ ಗಾಂಭೀರ್ಯದಿಂದ ಹಾದು ಹೋಗಿದ್ದು ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ದೃಶ್ಯ ಸೆರೆಯಾಗಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಉದನೆ ಎಂಬಲ್ಲಿ ಜನವಸತಿ ಇರುವ ಪ್ರದೇಶದಲ್ಲಿ ಕಾಡಾನೆಯು ಹೆದ್ದಾರಿಯನ್ನು ದಾಟಿದೆ. ಉದನೆ ಪೇಟೆ ಸಮೀಪದಲ್ಲಿ ಕಲಪ್ಪಾರು ಕಡೆಯಿಂದ ಬಂದ ಕಾಡಾನೆ ಪುತ್ತಿಗೆ ಕಡೆಗೆ ದಾಟಿದೆ. ಸೋಮವಾರ ಸಂಜೆ ವೇಳೆ ಕಾಡಾನೆ ತನಗೆ ತಿನ್ನಲು ಬೇಕಾದ ಸೊಪ್ಪಿನೊಂದಿಗೆ ರಸ್ತೆ ದಾಟುತ್ತಿರುವುದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಾಡಾನೆಯು ತನ್ನ ತಾನು ಪಾಡಿಗೆ ಸರಾಗವಾಗಿ ಹೆದ್ದಾರಿ ದಾಟುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ಆನೆ ರಸ್ತೆ ದಾಟುವ ತನಕ ಸವಾರರು ತಮ್ಮ ವಾಹನದೊಂದಿಗೆ ಕಾದು ನಿಂತು ಬಳಿಕ ತೆರಳಿದ್ದಾರೆ. ಈ ರೀತಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತಿರುವುದರಿಂದ ಈ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ವಾಹನ ಸವಾರರು ಎಚ್ಚರದಿಂದ ಸಂಚರಿಸುವಂತೆ ಸೂಚಿಸಲಾಗಿದೆ.