ಕೈಕೊಟ್ಟ ಮಳೆ: ಗೊಂಬೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ ಜನ
ಬೀದರ್: ಮಳೆಗಾಗಿ ಪ್ರಾರ್ಥಿಸಿ ಬೀದರ್ ಜಿಲ್ಲೆಯ ಹುಲಸೂರು ಪಟ್ಟಣದಲ್ಲಿ ಗೊಂಬೆಗಳಿಗೆ ಮದುವೆ ಮಾಡಿಸಲಾಗಿದೆ. ಮಳೆರಾಯನ ಆಗಮನಕ್ಕಾಗಿ ಹುಲಸೂರು ಪಟ್ಟಣದ ಮೃಘ ನಕ್ಷತ್ರದಂದು ಮಹಿಳೆಯರೆಲ್ಲ ಸೇರಿ ಗೊಂಬೆಗಳ ಮದುವೆ ಮಾಡಿಸಿದ್ದಾರೆ. ಈ ರೀತಿ ಮಾಡುವುದರಿಂದ ಮಳೆಯಾಗುತ್ತದೆ ಎಂಬುದು ಜನರ ನಂಬಿಕೆಯಾಗಿದ್ದು, ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
ಮನೆಯೊಂದರ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಎರಡು ಗೊಂಬೆಗಳ ಪರ ಮಹಿಳೆಯರು, ಬೀಗರು, ನೆಂಟರ ಸಮ್ಮುಖದಲ್ಲಿ ಮದುವೆ ನಡೆಸಲಾಗುತ್ತದೆ. ಮೊದಲಿಗೆ ಹಾಡುಗಳ ಮುಖಾಂತರ ಗೊಂಬೆಗೆ ಅರಿಶಿಣ, ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೇವಸ್ಥಾಕ್ಕೆ ಗೊಂಬೆಗಳನ್ನು ಕರೆದೊಯ್ದು ದರ್ಶನ ಪಡೆಯಲಾಗುತ್ತದೆ. ಬಳಿಕ ಮಂಟಪಕ್ಕೆ ಕರೆತಂದು ಅವುಗಳನ್ನು ಅಲಂಕರಿಸಿ ಅಕ್ಷತೆಯ ಹಾಡು ಮುಖಾಂತರ ಮದುವೆ ಮಾಡಲಾಗುತ್ತದೆ.
ಮದುವೆ ನಂತರ ಬೀಗರಿಗೆ, ನೆಂಟರಿಗೆ ಮಹಿಳೆಯರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ. ಈ ರೀತಿ ಗೊಂಬೆಗಳ ಮದುವೆ ಮಾಡಿಸಿದರೆ ಒಂದೇ ದಿನದಲ್ಲಿ ಮಳೆಯಾಗಿ ರೈತರು ಹೊಲದಲ್ಲಿ ಬಿತ್ತನೆ ಮಾಡಿ ಗ್ರಾಮ ಸುಭಿಕ್ಷವಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರದ್ದು.
ಇದನ್ನೂ ಓದಿ:ನಾಯಕತ್ವ ಬದಲಾವಣೆ ಬಗ್ಗೆ ಧಾರವಾಡ ಗೊಂಬೆಗಳು ನುಡಿದಿದ್ದ ಭವಿಷ್ಯ ನಿಜವಾಯ್ತಾ?