ವಿಷ್ಣು ಸ್ಮಾರಕ ನಿರ್ಮಾಣ ವಿಚಾರ: ನಟ ಅನಿರುದ್ಧ್ ಹೇಳಿದ್ದಿಷ್ಟು!
Published : Dec 30, 2023, 1:40 PM IST
ಮೈಸೂರು: ''ವಿಷ್ಣು ಸ್ಮಾರಕ ವಿಚಾರವಾಗಿ ಬಾಲಣ್ಣ ಅವರ ಕುಟುಂಬಕ್ಕೆ ಮನವಿ ಮಾಡಿದ್ದೇವೆ. 10 ಗುಂಟೆ ಜಾಗವನ್ನು ಕೇಳಿದ್ದೇವೆ. ಸರ್ಕಾರ ಶೀಘ್ರವಾಗಿ ಸಮ್ಮತಿಸಿದರೆ ಕೋಟ್ಯಂತರ ಅಭಿಮಾನಿಗಳಿಗೆ ಖುಷಿಯಾಗುತ್ತದೆ'' ಎಂದು ನಟ ಅನಿರುದ್ಧ್ ಜತ್ಕರ್ ತಿಳಿಸಿದರು.
ಸಾಹಸಸಿಂಹ ವಿಷ್ಣುವರ್ಧನ್ ಅವರ 14ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ, ಉದ್ಬೂರು ಗೇಟ್ ಬಳಿ ಇರುವ ವಿಷ್ಣು ಸ್ಮಾರಕದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಿದ್ದು, ಕಾರ್ಯಕ್ರಮವನ್ನು ಉದ್ಘಾಟಿಸಿ ಅನಿರುದ್ಧ್ ಮಾತನಾಡಿದರು. ''ಸರ್ಕಾರದಿಂದ ಇದು ಸಾಧ್ಯವಿಲ್ಲ. ಈಗಾಗಲೇ ಒಂದು ಬಾರಿ ಈ ವಿಚಾರವಾಗಿ ಸರ್ಕಾರ ಹಣ ಖರ್ಚು ಮಾಡಿದೆ. ಹಾಗಾಗಿ ಮತ್ತೊಂದು ಜಾಗಕ್ಕೆ ಸರ್ಕಾರದ ವತಿಯಿಂದಲೇ ಮಾಡಲು ಆಗಲ್ಲ. ಹಾಗಾಗಿ ವೈಯಕ್ತಿಕವಾಗಿ ಬಾಲಣ್ಣ ಅವರ ಕುಟುಂಬಕ್ಕೆ ಮನವಿ ಮಾಡಿದ್ದೇನೆ. ಏನಾಗುತ್ತದೆ ಎಂದು ಕಾದು ನೋಡೋಣ'' ಎಂದರು.
ಇದನ್ನೂ ಓದಿ:ಸಾಹಸಸಿಂಹನ 14ನೇ ಪುಣ್ಯಸ್ಮರಣೆ: ವಿಷ್ಣುವರ್ಧನ್ ಸಮಾಧಿಗೆ ಅಭಿಮಾನಿಗಳಿಂದ ನಮನ
''ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳು ವಿಶ್ವದೆಲ್ಲೆಡೆ ಇದ್ದಾರೆ. ಇಂದು 14ನೇ ವರ್ಷದ ಪುಣ್ಯಸ್ಮರಣೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ವಿವಿಧೆಡೆ ರಸಮಂಜರಿ ಕಾರ್ಯಕ್ರಮ, ಅನ್ನಸಂತರ್ಪಣೆ, ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ವಿಷ್ಣುಸ್ಮಾರಕದಲ್ಲಿ ಪ್ರತೀ ವಾರ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದವರು ರಕ್ತದಾನ ಶಿಬಿರ ಮತ್ತು ರಸಮಂಜರಿ ಕಾರ್ಯಕ್ರಮ ಆಯೋಜಿಸುತ್ತಾ ಬಂದಿರುವುದು ಶ್ಲಾಘನೀಯ ಕಾರ್ಯ. ಗ್ರಾಮೀಣ ಮತ್ತು ನಗರ ಪ್ರದೇಶದ ಬಡಾವಣೆಗಳಲ್ಲಿ ವಿಷ್ಣು ಅಪ್ಪಾಜಿ ಅವರ ಭಾವಚಿತ್ರವನ್ನು ಹಾಕಿ ಸಮಾಜಮಖಿ ಕೆಲಸ ಮಾಡುತ್ತಿದ್ದಾರೆ. ಅವರ ಚಿತ್ರಗಳು ಕೌಟುಂಬಿಕ ಪ್ರಧಾನವಾಗಿದ್ದವು. ಸಮಾಜದಲ್ಲಿನ ಶ್ರಮಜೀವಿಗಳಿಗೆ ಇಂದಿಗೂ ಪ್ರೇರಣೆಯಾಗಿದ್ದಾರೆ'' ಎಂದು ಅನಿರುದ್ಧ್ ತಿಳಿಸಿದರು.