ಹೈದರಾಬಾದ್:ಸಾಂಕ್ರಾಮಿಕ ರೋಗವೆಂಬುದು ಕಳೆದ ಎರಡು ವರ್ಷಗಳಿಂದ ಪ್ರಪಂಚದಾದ್ಯಂತ ಭೀತಿಯನ್ನು ಸೃಷ್ಟಿಸುತ್ತಿದೆ. ಕೋವಿಡ್ 19 ಮತ್ತು ಅದರ ವಿಭಿನ್ನ ರೂಪಾಂತರಗಳಿಂದ ಅನೇಕ ಜನರು ತಮ್ಮ ಜೀವಗಳನ್ನು ಅಥವಾ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ಇದೀಗ ಕೊರೊನಾ ವೈರಸ್ ನಂತರ, ಝೀಕಾ ವೈರಸ್ ಪ್ರಪಂಚದಾದ್ಯಂತ ಪುನರಾಗಮನ ಮಾಡುತ್ತಿರುವಂತೆ ಕಾಣುತ್ತಿದೆ.
ಭಾರತದಲ್ಲಿ ಈಗಾಗಲೇ ಹಲವಾರು ಝೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕದಲ್ಲಿ ಮೊದಲ ಪ್ರಕರಣ ವರದಿಯಾಗಿದೆ. ಐದು ವರ್ಷದ ಬಾಲಕಿಯಲ್ಲಿ ಈ ಸೋಂಕು ಇರುವುದು ಪತ್ತೆಯಾದ ಹಿನ್ನೆಲೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಸಚಿವ ಕೆ. ಸುಧಾಕರ್ ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಇದು ಮೊದಲ ಪ್ರಕರಣವಾಗಿದೆ. ವೈರಸ್ನನ್ನು ಎದುರಿಸಲು ಆರೋಗ್ಯ ಇಲಾಖೆ ಸಂಪೂರ್ಣ ಸುಸಜ್ಜಿತವಾಗಿದೆ ಮತ್ತು ಸನ್ನದ್ಧವಾಗಿದೆ. ಅಲ್ಲದೇ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
ರೋಗ ಹೇಗೆ ಹರಡುತ್ತದೆ?: ಝೀಕಾ ವೈರಸ್ ಸೋಂಕು ಹಗಲಿನಲ್ಲಿ ಸಕ್ರಿಯವಾಗಿರುವ ಈಡಿಸ್ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಇದು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಸೋಂಕುಗಳನ್ನು ಹರಡಲು ಕಾರಣವಾಗಿದೆ. WHO ಪ್ರಕಾರ, ಈ ವೈರಸ್ ಅನ್ನು ಮೊದಲು 1947 ರಲ್ಲಿ ಉಗಾಂಡಾದಲ್ಲಿ ಗುರುತಿಸಲಾಯಿತು. ಝೀಕಾ ವೈರಸ್ ಸೊಳ್ಳೆ ಕಡಿತ, ಲೈಂಗಿಕ ಸಂಭೋಗ ಮತ್ತು ರಕ್ತ ವರ್ಗಾವಣೆಯ ಮೂಲಕ ಹರಡುತ್ತದೆ. ಇದು ಗರ್ಭಿಣಿಯರಲ್ಲಿ ಭ್ರೂಣಕ್ಕೂ ಹರಡಬಹುದು.