ಹೈದರಾಬಾದ್:ಸ್ಥೂಲಕಾಯದಿಂದ ಅಥವಾ ಬೊಜ್ಜಿನಿಂದ ನಮ್ಮ ದೇಹದಲ್ಲಿ ಹಲವಾರು ಗಂಭೀರ ಸಮಸ್ಯೆಗಳಿಗೆ ಕಾರಣವಾಗುವ ಸ್ಥಿತಿಯಾಗಿದೆ. ಬೊಜ್ಜು ಪ್ರಸ್ತುತ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಆರೋಗ್ಯ ಬಿಕ್ಕಟ್ಟು ಎಂದು ಪರಿಗಣಿಸಲಾಗಿದೆ. ಸ್ಥೂಲಕಾಯದ ಕಾರಣಗಳ ಬಗ್ಗೆ ಜಾಗೃತಿ ಮೂಡಿಸಲು, ಅದರ ರೋಗನಿರ್ಣಯ ಮತ್ತು ತಡೆಗಟ್ಟುವಿಕೆಗೆ ಪರಿಣಾಮಕಾರಿ ಪರಿಹಾರಗಳನ್ನು ಉತ್ತೇಜಿಸಲು ಪ್ರತಿ ವರ್ಷ ಮಾರ್ಚ್ 4 ರಂದು ವಿಶ್ವ ಸ್ಥೂಲಕಾಯ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ.
2023 ರಲ್ಲಿ ಬದಲಾಗುತ್ತಿರುವ ದೃಷ್ಟಿಕೋನಗಳು: ‘ಬೊಜ್ಜಿನ ಬಗ್ಗೆ ಚರ್ಚಿಸೋಣ’ ಎಂಬ ವಿಷಯದ ಸುತ್ತ ವಿಶ್ವ ಸ್ಥೂಲಕಾಯ ದಿನವನ್ನು ಆಚರಿಸಲಾಗುತ್ತದೆ. ಹೆಚ್ಚಿನ ಜನರು ಸ್ಥೂಲಕಾಯದ ಬಗ್ಗೆ ಮಾತನಾಡಲು ಅನುವು ಮಾಡಿಕೊಡುತ್ತದೆ. ಅಧಿಕ ತೂಕ ಮತ್ತು ಸ್ಥೂಲಕಾಯವನ್ನು ಸಾಮಾನ್ಯವಾಗಿ ಗೇಲಿ ಮಾಡಲಾಗುತ್ತದೆ. ಸ್ಥೂಲಕಾಯದಿಂದ ಅವರು ಕುಟುಂಬ, ಸ್ನೇಹಿತರು, ಕಚೇರಿ, ಶಾಲೆ ಅಥವಾ ಇತರ ಸಾಮಾಜಿಕ ಕೂಟಗಳಲ್ಲಿ ಗಮನ ಅಥವಾ ಅಪಹಾಸ್ಯಕ್ಕೆ ಗುರಿಯಾಗುತ್ತಾರೆ. ಅನೇಕ ಬಾರಿ ಸ್ಥೂಲಕಾಯದ ರೋಗಿಗಳು ಜನರು ತಮ್ಮನ್ನು ಗೇಲಿ ಮಾಡಬಹುದೆಂಬ ಭಯದಿಂದ ಅವರು ಅನುಭವಿಸುವ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಬಹಿರಂಗಪಡಿಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಅವರ ಆರೋಗ್ಯದ ಗುಣಮಟ್ಟ ಕಡಿಮೆಯಾಗಬಹುದು ಮತ್ತು ಖಿನ್ನತೆಗೆ ಕಾರಣವಾಗಬಹುದು.
ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ, ಕ್ಯಾನ್ಸರ್ ಮತ್ತು ಪಾರ್ಶ್ವವಾಯು ಸೇರಿದಂತೆ ಮುಂತಾದ ವಿವಿಧ ಕಾಯಿಲೆಗಳ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ ಎಂಬುದು ಎಲ್ಲರಿಗೂ ತಿಳಿದಿದೆ. ಸ್ಥೂಲಕಾಯವು ಈ ಎಲ್ಲಾ ಕಾಯಿಲೆಗಳ ಮುಖ್ಯ ಕಾರಣಗಳಲ್ಲಿ ಒಂದಾಗಿದೆ ಮತ್ತು ಅವುಗಳ ತೊಡಕುಗಳನ್ನು ಹೆಚ್ಚಿಸುವ ಪ್ರಮುಖ ಅಂಶವಾಗಿದೆ. ವಿಶ್ವ ಸ್ಥೂಲಕಾಯ ಒಕ್ಕೂಟದ ಪ್ರಕಾರ, ಪ್ರಸ್ತುತ ವಿಶ್ವದಾದ್ಯಂತ ಸುಮಾರು 1 ಬಿಲಿಯನ್ ಜನರು ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. ಅದೇ ಸಮಯದಲ್ಲಿ 2035 ರ ವೇಳೆಗೆ, ಈ ಸಂಖ್ಯೆಯು 1.9 ಶತಕೋಟಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಅಂದರೆ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ಬೊಜ್ಜು ಸಮಸ್ಯೆಗೆ ಬಲಿಯಾಗಬಹುದು ಎಂದು ಅಂದಾಜಿಸಲಾಗಿದೆ.