ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರಗಳಲ್ಲಿ ನಡೆಯುವ ಪ್ರಗತಿಯಿಂದ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗುತ್ತಿದೆ. ಹೀಗಾಗಿ ವಿವಿಧ ರೀತಿಯ ಕ್ಯಾನ್ಸರ್‌ಗಳಿಂದ ಮುಕ್ತಿ ದೊರಕುತ್ತಿದೆ. ಇದರ ಹೊರತಾಗಿಯೂ ಕ್ಯಾನ್ಸರ್ ರೋಗಿಗಳ ಸಂಖ್ಯೆ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಹೆಚ್ಚುತ್ತಿದೆ. ಇದು ಆತಂಕಕಾರಿ ವಿದ್ಯಮಾನ. ಪ್ರತಿ ವರ್ಷ ಫೆಬ್ರುವರಿ 4 ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಈ ಮೂಲಕ ಕ್ಯಾನ್ಸರ್ ನಿರ್ಮೂಲನೆ ಹಾಗು ಇದಕ್ಕೆ ಸಂಬಂಧಿಸಿದ ಮಾಹಿತಿ, ಪ್ರಕಾರಗಳು, ಕಾರಣಗಳು ಮತ್ತು ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಅಂಕಿಅಂಶಗಳ ಪ್ರಕಾರ, 2010ರಲ್ಲಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದವರ ಸಂಖ್ಯೆ 82.9 ಲಕ್ಷವಾಗಿದ್ದರೆ, 2019ರಲ್ಲಿ ಈ ಅಂಕಿಅಂಶವು 20.9 ಶೇಕಡಾದಷ್ಟು ಏರಿಕೆಯಾಗಿ ಒಂದು ಕೋಟಿ ತಲುಪಿದೆ. ಮತ್ತೊಂದೆಡೆ, ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಪ್ರಸ್ತುತ, ವಿಶ್ವದ ಕ್ಯಾನ್ಸರ್ ರೋಗಿಗಳಲ್ಲಿ 20 ಪ್ರತಿಶತದಷ್ಟು ಜನರು ಭಾರತದಲ್ಲೇ ಇದ್ದಾರೆ ಎನ್ನುವುದು ಕಳವಳ ಮೂಡಿಸಿದೆ.
'ಕ್ಲೋಸ್ ದಿ ಕೇರ್ ಗ್ಯಾಪ್': ಭಾರತದಲ್ಲಿ ಪ್ರತಿ ವರ್ಷ ಸುಮಾರು 75,000 ಜನರು ಕ್ಯಾನ್ಸರ್‌ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಅಂಕಿಅಂಶಗಳಿಂದ ಮಾತ್ರವಲ್ಲ, ಜಾಗತಿಕವಾಗಿ ಸಾವಿನ ಪ್ರಮುಖ 10 ಕಾರಣಗಳಲ್ಲಿ ಕ್ಯಾನ್ಸರ್ ಕೂಡು ಎಂದು ಪರಿಗಣಿಸಿರುವ ಅಂಶದಿಂದಲೂ ಕ್ಯಾನ್ಸರ್ ಪ್ರಮಾಣ ಎಷ್ಟಿದೆ ಎಂಬುದು ತಿಳಿದಿದೆ. ಪ್ರಸ್ತುತ ವರ್ಷ ವಿಶ್ವ ಕ್ಯಾನ್ಸರ್ ದಿನವನ್ನು 'ಕ್ಲೋಸ್ ದಿ ಕೇರ್ ಗ್ಯಾಪ್' ಧ್ಯೇಯ ವಾಕ್ಯದಡಿ ಆಚರಿಸಲಾಗುತ್ತಿದೆ.
ಕಳವಳಕಾರಿ ಮಾಹಿತಿ: ಎಲ್ಲಾ ರೀತಿಯ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಜಾಗತಿಕವಾಗಿ ಆತಂಕ ಹೆಚ್ಚಿಸಿದೆ. ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ಪ್ರಕಾರ, 2020 ರಲ್ಲಿ ಸುಮಾರು 14 ಲಕ್ಷ ಜನರು ಕ್ಯಾನ್ಸರ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ, ವಿವಿಧ ರೀತಿಯ ಕ್ಯಾನ್ಸರ್ ಹೊಂದಿರುವ ರೋಗಿಗಳ ಸಂಖ್ಯೆಯಲ್ಲಿ ಒಟ್ಟು ಶೇಕಡಾ 12.8 ರಷ್ಟು ಹೆಚ್ಚಳವಾಗಿದೆ. ಇಷ್ಟೇ ಅಲ್ಲ, ಒಂದು ಅಂದಾಜಿನ ಪ್ರಕಾರ, 2025ರ ವೇಳೆಗೆ ಸುಮಾರು 15,69,793 ಜನರು ಕ್ಯಾನ್ಸರ್‌ನಿಂದ ಜೀವ ಕಳೆದುಕೊಳ್ಳುತ್ತಾರೆ. ಇನ್ನೊಂದು ವರದಿಯಂತೆ ಭಾರತದಲ್ಲಿ ಪ್ರತಿ ಗಂಟೆಗೆ 159 ಜನರು ವಿವಿಧ ರೀತಿಯ ಕ್ಯಾನ್ಸರ್‌ನಿಂದ ಸಾಯುತ್ತಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, 2020 ರ ವೇಳೆಗೆ, ಭಾರತದ ವಿವಿಧ ಕ್ಯಾನ್ಸರ್ ಸ್ಕ್ರೀನಿಂಗ್ ಕೇಂದ್ರಗಳಲ್ಲಿ 16 ಕೋಟಿ ಬಾಯಿ ಕ್ಯಾನ್ಸರ್, 8 ಕೋಟಿ ಸ್ತನ ಕ್ಯಾನ್ಸರ್ ಮತ್ತು 5.53 ಕೋಟಿ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಕಳೆದ ಎಂಟು ವರ್ಷಗಳಲ್ಲಿ, ಈ ಕಾಯಿಲೆಗೆ ಸಂಬಂಧಿಸಿದ ಸುಮಾರು 300 ಮಿಲಿಯನ್ ಗಂಭೀರ ಪ್ರಕರಣಗಳು ವರದಿಯಾಗಿವೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಆ್ಯಂಡ್ ರಿಸರ್ಚ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, 2020 ರಲ್ಲಿ ಕ್ಯಾನ್ಸರ್ ಪೀಡಿತ ಪುರುಷರ ಸಂಖ್ಯೆ ಸುಮಾರು 6.8 ಲಕ್ಷ ಎಂದು ಹೇಳಲಾಗಿದ್ದು, ಮಹಿಳೆಯರ ಸಂಖ್ಯೆ 7.1 ಲಕ್ಷ ಎಂದು ಹೇಳಲಾಗಿತ್ತು. ಅದೇ ವರದಿಯಲ್ಲಿ, 2025 ರ ವೇಳೆಗೆ ಪುರುಷರಲ್ಲಿ ಸುಮಾರು 7.6 ಲಕ್ಷ ಕ್ಯಾನ್ಸರ್ ಪ್ರಕರಣಗಳು ಮತ್ತು ಮಹಿಳೆಯರಲ್ಲಿ 8.1 ಲಕ್ಷ ಪ್ರಕರಣಗಳು ವರದಿಯಾಗಬಹುದು ಎಂದು ಭವಿಷ್ಯ ನುಡಿದಿದೆ.
1993ರಲ್ಲಿ ಮೊದಲ ಕ್ಯಾನ್ಸರ್ ದಿನ: ಜಾಗತಿಕ ಮಟ್ಟದಲ್ಲಿ ಎಲ್ಲಾ ರೀತಿಯ ಕ್ಯಾನ್ಸರ್ ನಿರ್ಮೂಲನೆಗೆ ಜಾಗೃತಿ ಮೂಡಿಸಲು, ಅದಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಚರ್ಚಿಸಲು ಮತ್ತು ವೈದ್ಯರು ಮತ್ತು ಸರ್ಕಾರಿ ಸಂಸ್ಥೆಗಳು, ಸಾಮಾಜಿಕ ಮತ್ತು ಆರೋಗ್ಯ ಸಂಬಂಧಿತ ಸಂಸ್ಥೆಗಳಿಗೆ ವೇದಿಕೆಯನ್ನು ನೀಡುವುದು ಮತ್ತು ಎಲ್ಲಾ ರೀತಿಯ ಕ್ಯಾನ್ಸರ್ ತಡೆಗಟ್ಟಲು ಕ್ರಮಗಳನ್ನು ರಚಿಸಲು ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿವರ್ಷ ಫೆಬ್ರವರಿ 4 ರಂದು ಆಚರಿಸಲಾಗುತ್ತದೆ. ಈ ದಿನದಂದು, ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಅದರ ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಸಂಬಂಧಿತ ಸಂಸ್ಥೆಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಹ ನಡೆಸುತ್ತವೆ.