ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವ್ಯಾಯಾಮ, ದೈಹಿಕ ಚಟುವಟಿಕೆಗಳಿಂದ ಪುರುಷರಿಗಿಂತ ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆಯೇ ಹೆಚ್ಚಿನ ದುಷ್ಪರಿಣಾಮ ಉಂಟಾಗಿದೆ ಎಂಬುದು ಸಂಶೋಧನೆಯಿಂದ ತಿಳಿದು ಬಂದಿದೆ. ನ್ಯೂಯಾರ್ಕ್ನ ಬಿಂಗ್ಹ್ಯಾಮ್ಟನ್ ವಿಶ್ವವಿದ್ಯಾಲಯದ ಇತ್ತೀಚಿನ ಸಂಶೋಧನೆಯು ಈ ಮಾಹಿತಿ ಬಹಿರಂಗಗೊಳಿಸಿದೆ.
ಸಂಶೋಧಕರು ಸಾಂಕ್ರಾಮಿಕ ರೋಗವನ್ನು ಮೂರು ಹಂತಗಳಾಗಿ ಅಂದರೆ ಕೋವಿಡ್ಗೆ ಮುನ್ನ, ಕೋವಿಡ್ ಸಮಯ ಹಾಗೂ ವೈರಸ್ ಅಂತ್ಯದ ಕಾಲ ಎಂದು ವಿಂಗಡಿಸಿದ್ದಾರೆ. ಕೋವಿಡ್ ಸಮಯದಲ್ಲಿ ಲಾಕ್‌ಡೌನ್ ಇದ್ದರೆ, ಬಳಿಕ ಕೋವಿಡ್ ಕೊನೆಗಾಲವು ನಿರ್ಬಂಧಗಳ ಸಡಿಲಿಕೆಯನ್ನು ಒಳಗೊಂಡಿತ್ತು. ಈ ಸಾಂಕ್ರಾಮಿಕವು ಹೆಚ್ಚಾಗಿರುವಾಗ ಮಹಿಳೆಯರು ಮಾನಸಿಕ ಯೋಗಕ್ಷೇಮ ಹೊಂದಲು ಮಿತವಾದ ವ್ಯಾಯಾಮದ ಅಗತ್ಯವಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಆದರೆ, ಇದಕ್ಕೆ ವಿರುದ್ಧ ಎಂಬಂತೆ, ಕೋವಿಡ್ ಸಂದರ್ಭದಲ್ಲಿ ಪುನರಾವರ್ತಿತ (ಒಂದಕ್ಕಿಂತ ಹೆಚ್ಚು ಬಾರಿ) ವ್ಯಾಯಾಮವು ಪುರುಷರಿಗೆ ಪ್ರಯೋಜನಕಾರಿಯಾಗಿದೆ. ಬೆಗ್‌ಡಾಚೆ ಎಂಬುವರ ಸಂಶೋಧನೆಯಂತೆ, ಮಹಿಳೆಯರು ತಮ್ಮ ವರ್ಕ್ಔಟ್ ನಿಯಮಗಳನ್ನು ಮಾರ್ಪಾಡು ಮಾಡಿಕೊಳ್ಳಬೇಕು. ಕೋವಿಡ್ ವೇಳೆ ಅವರಿಗೆ ತಮ್ಮ ಮನಸ್ಸು ಸ್ಥಿರವಾಗಿ ಇರಿಸಿಕೊಳ್ಳಲು ಮತ್ತು ಅವರ ಉತ್ಸಾಹವನ್ನು ಉನ್ನತ ಮಟ್ಟದಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಅಲ್ಲದೆ, ಕೊರೊನಾ ಕಾಲದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಒತ್ತಡ ಅನುಭವಿಸಿರುವುದು ಕಂಡು ಬಂದಿದೆ. ಅವರಲ್ಲಿನ ಒತ್ತಡ ನಿರ್ವಹಣಾ ಸಾಮರ್ಥ್ಯ ಕಡಿಮೆ ಇರುವುದೂ ಕೂಡ ಇದಕ್ಕೆ ಕಾರಣವಾಗಿದೆ. ಆದ್ದರಿಂದ ಕೋವಿಡ್ ಸಂದರ್ಭದಲ್ಲಿ ಪುನರಾವರ್ತಿತ ವ್ಯಾಯಾಮವು ಮಹಿಳೆಯರ ಒತ್ತಡ ಹೆಚ್ಚಿಸುತ್ತದೆ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಸಂಶೋಧಕ ಬೆಗ್‌ಡಾಚೆ.
ಇದನ್ನೂ ಓದಿ:ವಾಕಿಂಗ್ ಮಾಡಿ ಕ್ಯಾನ್ಸರ್, ಬುದ್ಧಿಮಾಂದ್ಯತೆ ತಡೆಯಿರಿ.. ವೇಗದ ಹೆಜ್ಜೆಯಿಂದ ಹತ್ತು ಹಲವು ಲಾಭ