ಕೊರೊನಾ ವೈರಸ್ ಎಂಬ ಮಾರಕ ರೋಗದ ವಿರುದ್ಧ ವಿಶ್ವದಾದ್ಯಂತ ಕೊನೆಗೂ ಲಸಿಕೆ ವಿತರಣೆಯಾಗುತ್ತಿದೆ. ಕೆಲ ರಾಷ್ಟ್ರಗಳು ಕೊರೊನಾ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿ ನೀಡಲು ಸ್ಪರ್ಧೆ ನಡೆಸುತ್ತಿವೆ. ಭಾರತದಂತೆಯೇ ಇತರ ರಾಷ್ಟ್ರಗಳಲ್ಲೂ ಪ್ರತಿ ಪ್ರಜೆಗೂ ಲಸಿಕೆ ತಲುಪಬೇಕೆಂಬ ಶಪಥ ಮಾಡಿವೆ. ಅಲ್ಲದೆ ತಾವಾಗಿಯೇ ಲಸಿಕೆ ಉತ್ಪಾದಿಸಿ ವಿತರಿಸುವ ಕಾರ್ಯವೂ ನಡೆಯುತ್ತಿದೆ.
ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಗುರಿ ಹೊಂದಿದ್ದರೂ, ವಿವಿಧ ದೇಶದಲ್ಲಿ ವ್ಯಾಕ್ಸಿನೇಷನ್ ವೇಗದ ಪ್ರಮಾಣ ಭಿನ್ನವಾಗಿರುತ್ತದೆ. ಇದಲ್ಲದೆ ಎರಡು ಬಾರಿ ಲಸಿಕೆ ನೀಡಬೇಕಾಗಿರುವುದರಿಂದ ಲಸಿಕೆ ವಿತರಣೆ ಹಂತ ಸವಾಲಿನ ಕೆಲಸವೇ ಆಗಿದೆ.
ಭಾರತದಲ್ಲಿ ಪ್ರಸ್ತುತ ಎರಡು ಲಸಿಕೆಗಳನ್ನು ಬಳಸಲಾಗುತ್ತಿದೆ ಕೋವಾಕ್ಸಿನ್ (ಭಾರತ್ ಬಯೋಟೆಕ್) ಮತ್ತು ಕೋವಿಶೀಲ್ಡ್ (ಅಸ್ಟ್ರಾಜೆನೆಕಾ). ಎರಡನೇ ಡೋಸ್‌ನ ಮೊದಲ ಡೋಸ್ ನೀಡಿದ ನಂತರ 28 ದಿನಗಳ ಬಳಿಕ ಮತ್ತೆ ನೀಡಬೇಕಾಗಿದೆ.
ಭಾರತದಲ್ಲಿ ಕೊರೊನಾ ವಿರುದ್ಧ ವ್ಯಾಕ್ಸಿನೇಷನ್ 2021 ಜನವರಿ 16ರಂದು ಪ್ರಾರಂಭವಾಯಿತು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೀಡುವ ಉದ್ದೇಶ ಹೊಂದಲಾಯಿತು. ಮಾರ್ಚ್‌ನಿಂದ ಕೊಮೊರ್ಬಿಡಿಟಿ ಹೊಂದಿರುವ 45 ವರ್ಷಕ್ಕಿಂತ ಮೇಲ್ಪಟ್ಟ ಜನರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಜನರು ಲಸಿಕೆ ಪಡೆಯಲು ಅವಕಾಶ ನೀಡಲಾಯಿತು.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿಯ ಪ್ರಕಾರ, 2021 ಮಾರ್ಚ್ 19ರ ವೇಳೆಗೆ 69,13,587 ಭಾರತೀಯರಿಗೆ ಸಂಪೂರ್ಣ ಲಸಿಕೆ ನೀಡಲಾಯಿತು. ಇದು ಒಟ್ಟು ಭಾರತೀಯ ಜನಸಂಖ್ಯೆಯ 0.51% ಆಗಿದೆ. ಆದಾಗ್ಯೂ, ಸಂಪೂರ್ಣ ಲಸಿಕೆ ಹಾಕಿದ ವ್ಯಕ್ತಿಗಳ ಸಂಖ್ಯೆಯಿಂದ ಭಾರತವು ಅಗ್ರ 20 ದೇಶಗಳಲ್ಲಿ ಎರಡನೇ ಸ್ಥಾನದಲ್ಲಿದೆ.
ಈ ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿ ಅಮೆರಿಕದಲ್ಲಿ 3.90 ಕೋಟಿಗೂ ಹೆಚ್ಚು (3,90,81,330) ಜನರಿಗೆ ಸಂಪೂರ್ಣ ಲಸಿಕೆ ನೀಡಲಾಗಿದೆ. ಇದು ಒಟ್ಟು ಜನಸಂಖ್ಯೆಯ 11.94% ಆಗಿದೆ. ಯುಎಸ್ನಲ್ಲಿ ಬಳಕೆಯಲ್ಲಿರುವ ಲಸಿಕೆಗಳಲ್ಲಿ ಫಿಜರ್-ಬಯೋಟೆಕ್, ಮಾಡರ್ನಾ, ಜಾನ್ಸನ್ ಮತ್ತು ಜಾನ್ಸನ್ ಅವರ ಲಸಿಕೆಗಳು ಸೇರಿವೆ. ಇನ್ನೂ ಎರಡು ಲಸಿಕೆಗಳು ಬಳಕೆಗೆ ಬೇಕಾದ ಒಪ್ಪಿಗೆ ಪಡೆಯಬೇಕಿದೆ.
ಭಾರತದ ನಂತರದ ಸ್ಥಾನದಲ್ಲಿ ಇಸ್ರೇಲ್ ಇದೆ. ಅಲ್ಲಿ ಒಟ್ಟು 44,80,810 ಜನರಿಗೆ ಲಸಿಕೆ ನೀಡಲಾಗಿದೆ. ಇದು ಅವರ ಒಟ್ಟು ಜನಸಂಖ್ಯೆಯ ಅರ್ಧದಷ್ಟು (50.43%) ಆಗಿದೆ.
ಯಾವ ದೇಶದಲ್ಲಿ ಎಷ್ಟು ಜನರಿಗೆ ಲಸಿಕೆ :
1. ಅಮೆರಿಕ: 3,90,81,330
2. ಭಾರತ: 69,13,587
3. ಇಸ್ರೇಲ್: 44,80,810
4. ಟರ್ಕಿ: 44,39,972
5. ಬ್ರೆಜಿಲ್: 33,03,094
6. ಜರ್ಮನಿ: 30,97,094