ಕಳೆದ ಕೆಲ ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಅಚ್ಚರಿಯ ರೀತಿ ಏರಿಕೆಯಾಗುತ್ತಿದೆ. ಈ ನಡುವೆ ಕೋವಿಡ್ ಸಹ ಹೃದಯ ಸಂಬಂಧಿ ಕಾಯಿಲೆಗಳಿಗೆ ಸವಾಲಾಗಿ ಪರಿಣಮಿಸಿದೆ.
ಆದ್ದರಿಂದ ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಜನರಿಗೆ ಹೆಚ್ಚಿನ ಅರಿವು ಮೂಡಿಸಲು ಮತ್ತು ಅವರ ಹೃದಯದ ಬಗ್ಗೆ ಉತ್ತಮ ಕಾಳಜಿ ವಹಿಸುವಂತೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ 29ರಂದು ವಿಶ್ವ ಹೃದಯ ದಿನ ಆಚರಿಸಲಾಗುತ್ತದೆ.
ಹೃದಯವು ನಮ್ಮ ದೇಹದಲ್ಲಿನ ಪ್ರಮುಖ ಅಂಗ ಮತ್ತು ಅದಕ್ಕೆ ಸಂಬಂಧಿಸಿದ ರೋಗಗಳು ಜೀವಕ್ಕೆ ಮಾರಕವಾಗಬಹುದು. ಕೋವಿಡ್ ಸಮಯದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಹೆಚ್ಚಿನ ಸೋಂಕಿಗೆ ತುತ್ತಾದರು.
ಹೆಚ್ಚು ಅಚ್ಚರಿಯ ಸಂಗತಿ ಎಂದರೆ ಹೃದಯ ಸಂಬಂಧಿ ಕಾಯಿಲೆಗೆ ಇತ್ತೀಚಿಗೆ ಯುವ ಜನಾಂಗವು ಒಳಗಾಗುತ್ತಿದೆ. ಹೃದಯಾಘಾತದಿಂದ ಸಾವು-ನೋವಿನ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಹೃದಯರಕ್ತನಾಳದ ಕಾಯಿಲೆ (ಸಿವಿಡಿ) ಪ್ರಪಂಚದಲ್ಲಿಯೇ ಅತೀ ಹೆಚ್ಚು ಸಾವು ತಂದೊಡ್ಡುವ ಕಾಯಿಲೆ ಎನಿಸಿದೆ.
ಇದರ ಪರಿಣಾಮವಾಗಿ ವರ್ಷಕ್ಕೆ 18.6 ಮಿಲಿಯನ್ ಸಾವು ಸಂಭವಿಸುತ್ತವೆ. ಈ ಸಾವುಗಳಿಗೆ ಪ್ರಮುಖ ಕಾರಣವಾಗಿ ಇವು ಕಂಡು ಬರುತ್ತವೆ. ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜು, ವಾಯು ಮಾಲಿನ್ಯ, ಕಾರ್ಡಿಯಾಕ್ ಅಮಿಲಾಯ್ಡೋಸಿಸ್.
ನಾವು ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆಯನ್ನ ನಿರ್ಲಕ್ಷಿಸುತ್ತೇವೆ. ಹೀಗಾಗಿ, ಹೃದಯ ಕಾಳಜಿಯೂ ಪ್ರಮುಖ ದಿನಚರಿಯನ್ನಾಗಿಸುವ ದೃಷ್ಟಿಯಿಂದ ಸೆ.29ರಂದು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತಿದೆ. 1999ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿ ವಿಶ್ವ ಹೃದಯ ಒಕ್ಕೂಟವು ವಿಶ್ವಹೃದಯ ದಿನವನ್ನು ಆಚರಿಸಿತು.
ಈ ವರ್ಷ ಹೃದಯ ಸಂಬಂಧಿ ಆರೋಗ್ಯ ಕಾಪಾಡುವ ಹಾಗೂ ಜಾಗೃತಿ ಮೂಡಿಸುವ ದೃಷ್ಟಿಯಿಂದ ‘ಯೂಸ್ ಹಾರ್ಟ್ ಟೂ ಕನೆಕ್ಟ್’ ಎಂಬ ವಾಕ್ಯದೊಂದಿಗೆ ಹೃದಯ ದಿನಾಚರಣೆ ಮಾಡಲಾಗುತ್ತಿದೆ.