ಲಕ್ನೋ: ಭಾರತದ ಕೃಷಿ ಮೇಲೆ ಅರಿಶಿಣ ಸಸ್ಯಗಳಲ್ಲಿ ಪತ್ತೆಯಾಗಿರುವ ಹೊಸ ರೋಗ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಲಕ್ನೋ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ಲಕ್ನೋ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಅಮೃತೇಶ್ ಸಿ ಶುಕ್ಲಾ ನೇತೃತ್ವದಲ್ಲಿ ಏಳು ಮಂದಿ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದಾರೆ. ಮೂರು ವರ್ಷಗಳ ಕಾಲ ನಡೆದ ಅಧ್ಯಯನದಲ್ಲಿ ಅವರು ಹೊಸ ರೋಗವನ್ನು ಪತ್ತೆ ಮಾಡಿದ್ದಾರೆ. ಈ ಕುರಿತು ಸಂಶೋಧನೆ ಫಲಿತಾಂಶವನ್ನು ಪ್ರಖ್ಯಾತ ಅಂತಾರಾಷ್ಟ್ರೀಯ ಜರ್ನಲ್ ನ್ಯೂ ಡಿಸೀಸ್ ರಿಪೋರ್ಟ್ನಲ್ಲಿ ಪ್ರಕಟಿಸಲಾಗಿದೆ.
ಅರಿಶಿಣದಲ್ಲಿ ಕರ್ಕ್ಯುಮಿನ್ ಎಂಬ ರಾಸಾಯನಿಕ ಸಂಯುಕ್ತವೂ ಕಂಡು ಬರುತ್ತದೆ. ಔಷಧಿಯ ಗುಣ ಮತ್ತು ಹಲವು ಡಯಟರಿ ಪೂರಕ, ಕಾಸ್ಮೆಟಿಕ್ ಮತ್ತು ಆಹಾರದ ರುಚಿ ಮತ್ತು ಔಷಧ ಬಳಕೆಗೆ ಇದನ್ನು ಬಳಕೆ ಮಾಡುವ ಹಿನ್ನೆಲೆ ಇದಕ್ಕೆ ಜಾಗತಿಕವಾಗಿ ಹೆಚ್ಚಿನ ಬೇಡಿಕೆ ಇದೆ. ಆದರೆ, ಇದೀಗ ಈ ಅರಿಶಿಣದಲ್ಲಿ ಎಲೆ ಚುಕ್ಕಿ ರೋಗವನ್ನು ತಮ್ಮ ತಂಡ ಪತ್ತೆ ಮಾಡಿದೆ ಎಂದು ಪ್ರೊ ಶುಕ್ಲಾ ತಿಳಿಸಿದ್ದಾರೆ. ಲಕ್ನೋ ಯುನಿವರ್ಸಿಟಿ ಜೊತೆಗೆ ಬ್ರಿಟಿಷ್ ಕೊಲಂಬಿಯಾ ಯುನಿವರ್ಸಿಟಿ, ಕೆನಡಾ ಮತ್ತು ಮಾರಿಷಿಯಸ್ನಲ್ಲಿ ವಿಸಿಟಿಂಗ್ ಸಿಬ್ಬಂದಿಯಾಗಿ ಇವರು ಸೇವೆ ಸಲ್ಲಿಸುತ್ತಿದ್ದಾರೆ.
ಅರಿಶಿಣ ಕೃಷಿ ಮೇಲೆ ಪರಿಣಾಮ: ಈ ಕುರಿತು ಮಾತನಾಡಿರುವ ಅವರು, ಭಾರತದಲ್ಲಿನ ಅರಿಶಿಣದಲ್ಲಿ ನಾವು, ಕೊಲೆಟೊಟ್ರಿಕಮ್ ಸಿಯಾಮೆನ್ಸ್ ಎಂಬ ಶಿಲೀಂಧ್ರ ಸಸ್ಯ ರೋಗಕಾರಕದಿಂದ ಉಂಟಾದ ಎಲೆ ಚುಕ್ಕೆ ರೋಗದ ಮೊದಲ ಪ್ರಕರಣವನ್ನು ದಾಖಲಿಸಿದ್ದೇವೆ. ಸಾಮಾನ್ಯವಾಗಿ ಆರೋಗ್ಯಯುತ ಅರಿಶಿಣ ಸಸ್ಯದಲ್ಲಿ 4.17ರಷ್ಟು ಕುರ್ಕ್ಯುಮಿನ್ ಇರುತ್ತದೆ. ಯಾವಾಗ ಇದರ ಪ್ರಮಾಣ ಅರ್ಧದಷ್ಟು ಆಗುತ್ತದೆ. ಅಂದರೆ 2.08ರಷ್ಟು ಆಗುತ್ತದೆ, ಆಗ ಈ ರೋಗ ಕಾಣಿಸುತ್ತದೆ. ಈ ರೋಗವು ಅರಿಶಿಣ ಕೃಷಿ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೃಷಿಕರು ಎಷ್ಟೇ ಕಷ್ಟಪಟ್ಟರೂ ಉತ್ಪಾದನೆಯಲ್ಲಿ ಕುಂಠಿತ ಕಾಣುವ ಸಾಧ್ಯತೆ ಇದೆ ಎಂದಿದ್ದಾರೆ.
ಭಾರತವೂ ಜಾಗತಿಕವಾಗಿ ಅರಿಶಿಣವನ್ನು ಅತಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ, ಬಳಕೆ ಮಾಡುವ ಮತ್ತು ರಫ್ತು ಮಾಡುವ ದೇಶವಾಗಿದೆ. ಅಧ್ಯಯನದ ಫಲಿತಾಂಶವೂ ತಿಳಿಸುವಂತೆ ಈ ರೋಗದ ಬಗ್ಗೆ ಒಮ್ಮೆ ನಾವು ತಿಳಿದರೆ ಮಾತ್ರ ಇದನ್ನು ಉಪಶಮನ ಮಾಡಲು ಮಾರ್ಗವನ್ನು ಪತ್ತೆ ಮಾಡಬಹುದು. ಎಲೆ ಚುಕ್ಕಿ ರೋಗ ಲಕ್ಷಣದಲ್ಲಿ ಎಲೆಯ ಮೇಲ್ಮೈನಲ್ಲಿ ಸಣ್ಣ ಚುಕ್ಕೆಗಳನ್ನು ಕಾಣಬಹುದು. ಈ ರೋಗ ಕಾಣಿಸಿಕೊಂಡ ಎಲೆಗಳು ಕ್ರಮೇಣವಾಗಿ ಹಳದಿ ಬಣ್ಣದ ಜೊತೆಗೆ ಕಂದು ಬಣ್ಣದ ಅನಿಯಮಿತ ಚುಕ್ಕೆಗಳನ್ನು ಹೊಂದುತ್ತವೆ. ಇದರಿಂದ ಸಸ್ಯದ ಇಳುವರಿ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.
ಈ ಪ್ರಮುಖ ಬೆಳೆಗಳ ನಿರಂತರ ಆರೋಗ್ಯ ಮತ್ತು ಉತ್ಪಾದಕತೆಯನ್ನು ಖಚಿತಪಡಿಸಿಕೊಳ್ಳಲು ರೋಗವನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ತಂತ್ರಗಳನ್ನು ವಿನ್ಯಾಸಗೊಳಿಸಲು ಮತ್ತು ಕಾರ್ಯಗತಗೊಳಿಸಲು ಸಂಶೋಧನೆಗಳು ಪ್ರಮುಖವಾಗಿವೆ ಎಂದು ಪ್ರೊ ಶುಕ್ಲಾ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಮುಖದ ಸೌಂದರ್ಯ ಹೆಚ್ಚಿಸುವಲ್ಲಿ ಹೈಲುರಾನಿಕ್ ಆಮ್ಲದ ಪಾತ್ರವೇನು? ಯಾವ ವಯಸ್ಸು ಇದರ ಬಳಕೆಗೆ ಸೂಕ್ತ?