ಕರ್ನಾಟಕ

karnataka

ಪಳ ಪಳ ಹೊಳೆಯುವ ಹಲ್ಲು ನಿಮ್ಮದಾಗಬೇಕಾ; ನೈಸರ್ಗಿಕ ಪದಾರ್ಥಗಳಲ್ಲೇ ಇದೆ ಪರಿಹಾರ

By ETV Bharat Karnataka Team

Published : Nov 7, 2023, 7:39 PM IST

Tips for healthy teeth : ನಮ್ಮ ಸುತ್ತಮುತ್ತವೇ ಇರುವ ನೈಸರ್ಗಿಕ ವಸ್ತುಗಳಿಂದಲೇ ಸುಲಭವಾಗಿ ನಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲದೆ ಅಂದವನ್ನೂ ಹೆಚ್ಚಿಸಿಕೊಳ್ಳಬಹುದು.

Some tips for tooth health
ಹಲ್ಲಿನ ಸೌಂದರ್ಯಕ್ಕೆ ಕೆಲವು ಟಿಪ್ಸ್​

ನಮ್ಮ ಮುಖದ ಸೌಂದರ್ಯಕ್ಕೆ ಚರ್ಮದ ಕಾಂತಿ, ಅಂದ ಚಂದ ಎಷ್ಟು ಮುಖ್ಯವೋ ಸೊಗಸಾದ ಹಲ್ಲುಗಳು ಕೂಡ ಸೌಂದರ್ಯವನ್ನು ಹೆಚ್ಚಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿರಿಯರನ್ನು ಕೇಳಿದರೆ ಒಪ್ಪ ಓರಣವಾಗಿರುವ ಹಲ್ಲುಗಳೇ ಮುಖಕ್ಕೆ ಲಕ್ಷಣ ಹಾಗೂ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ. ಮುಖಕ್ಕೆ ಸೌಂದರ್ಯದ ಜೊತೆಗೆ ಲಕ್ಷಣವನ್ನು ಕೊಡುವ ಹಲ್ಲುಗಳನ್ನು ಹಾಳಾಗದಂತೆ ಕಾಪಾಡಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಇಲ್ಲಿ ಕೆಲವು ಟಿಪ್ಸ್​ ಇವೆ.

ಇಂದಿನ ಆಧುನಿಕ ಜೀವನಶೈಲಿ, ಅದರೊಟ್ಟಿಗೆ ಬಂದಿರುವ ಆಹಾರಶೈಲಿ, ದೇಹದ ಆರೋಗ್ಯ ಮಾತ್ರವಲ್ಲ, ನಮ್ಮ ಹಲ್ಲಿನ ಆರೋಗ್ಯವನ್ನೂ ಕೆಡಿಸುತ್ತವೆ. ಹಲ್ಲಿನ ಆರೋಗ್ಯವನ್ನು ಹಾಳು ಮಾಡುವ ಬ್ಯಾಕ್ಟಿರಿಯಾಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಕೆಲವು ಸಲಹೆಗಳನ್ನು ಇಲ್ಲಿ ವಿವರಿಸಲಾಗಿದೆ.

ಬೇವು: ನಮ್ಮ ಹಲ್ಲಿನ ಆರೈಕೆಯಲ್ಲಿ ಬೇವು ಪ್ರಮುಖ ಪಾತ್ರ ವಹಿಸುತ್ತದೆ. ಇದರ ನೈಸರ್ಗಿಕ ಆ್ಯಂಟಿ ಬ್ಯಾಕ್ಟಿರಿಯಾ​ ಗುಣಲಕ್ಷಣಗಳು ಒಸಡುಗಳನ್ನು ರಕ್ಷಿಸಲು, ಬ್ಯಾಕ್ಟಿರಿಯಾ ವಿರುದ್ಧ ಹೋರಾಡಲು ಮತ್ತು ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೇವಿನ ಕಡ್ಡಿಗಳಿಂದ ಹಲ್ಲು ಉಜ್ಜುವುದರಿಂದ ಹಲ್ಲುಗಳು ಶಕ್ತಿಯುತವಾಗುತ್ತವೆ.

ಇದ್ದಿಲು: ನಮ್ಮ ಹಿರಿಯರು ಹಲ್ಲುಜ್ಜಲು ಇದ್ದಿಲನ್ನೇ ಬಳಸುತ್ತಿದ್ದರು. ಇದ್ದಿಲು ಹಲ್ಲುಗಳನ್ನು ಬಿಳುಪಾಗಿಸಲು ಉಪಯುಕ್ತವಾಗಿದೆ. ಸಂಸ್ಕರಿಸಿದ ಮೃದುವಾದ ಇದ್ದಿಲು ಪುಡಿ ಹಲ್ಲುಗಳ ಮೇಲಿನ ಕಲೆಗಳನ್ನು ಹೋಗಲಾಡಿಸಿ ಹಲ್ಲುಗಳನ್ನು ಬಿಳಿಯಾಗಿಸುತ್ತದೆ.

ಅರಿಶಿನ: ಇದರ ನೈಸರ್ಗಿಕ ಉರಿಯೂತ ನಿವಾರಕ ಹಾಗೂ ಬ್ಯಾಕ್ಟಿರಿಯಾ ವಿರೋಧಿ ಗುಣಗಳು ವಸಡುಗಳನ್ನು ಆರೋಗ್ಯವಾಗಿರಿಸುತ್ತದೆ. ಅರಶಿನದ ಕೊಂಬು ಅಥವಾ ಪುಡಿ ಮಾಡಿದ ಅರಿಶಿನವನ್ನು ಹಲ್ಲುಗಳಿಗೆ ಹಚ್ಚಬೇಕು. ಹೀಗೆ ಮಾಡುವುದರಿಂದ ಹಲ್ಲಿನ ಬಣ್ಣ ಬದಲಾಗುವುದಲ್ಲದೆ ಒಸಡುಗಳ ಆರೋಗ್ಯವೂ ಉತ್ತಮವಾಗಿರುತ್ತದೆ.

ಸ್ಟ್ರಾಬೆರಿ: ಸ್ಟ್ರಾಬೆರಿ ಹಣ್ಣುಗಳು ಮುಖ ಹಾಗೂ ಚರ್ಮದ ಕಾಂತಿಯನ್ನು ವೃದ್ಧಿಗೊಳಿಸುವುದು ಮಾತ್ರವಲ್ಲದೆ ಹಲ್ಲಿನ ಆರೋಗ್ಯಕ್ಕೂ ಉತ್ತಮ. ಸ್ಟ್ರಾಬೆರಿಗಳಲ್ಲಿರುವ ಮಾಲಿಕ್​ ಆಮ್ಲ(ಮೆಲೊನಿಕ್​ ಆಮ್ಲ)ವು ಹಲ್ಲಿನ ಮೇಲಿನ ಕಲೆಗಳನ್ನು ಹೋಗಲಾಡಿಸುತ್ತದೆ. ಸ್ಟ್ರಾಬೆರಿಗಳ ತಿರುಳಿನಿಂದ ಬ್ರಷ್ ಮಾಡುವುದರಿಂದ ಹಲ್ಲಿನ ಕಾಂತಿ ಇನ್ನಷ್ಟು ಹೆಚ್ಚಾಗುತ್ತದೆ.

ಲವಂಗ:ಲವಂಗವನ್ನು ಬಾಯಲ್ಲಿ ಹಾಕಿಕೊಂಡರೇ ಸಾಕು, ಆಹಾ ಪರಿಮಳ. ಈ ಅದ್ಭುತವಾದ ಪರಿಮಳ ಹೊಂದಿರುವ ಲವಂಗ ನಮ್ಮ ಹಲ್ಲುಗಳ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ಬ್ಯಾಕ್ಟಿರಿಯಾ ವಿರೋಧಿ ಗುಣಲಕ್ಷಣಗಳು ಹಲ್ಲು ನೋವು ಕಡಿಮೆ ಮಾಡಲು ಮತ್ತು ವಸಡುಗಳನ್ನು ರಕ್ಷಿಸಲು ಸಹಾಯ ಮಾಡುತ್ತವೆ. ಎರಡು ಹನಿ ಲವಂಗದ ಎಣ್ಣೆಯನ್ನು ಒಸಡುಗಳು ಮತ್ತು ಬಣ್ಣ ಬದಲಾಗಿರುವ ಹಲ್ಲುಗಳ ಮೇಲೆ ಹಚ್ಚಿದರೆ, ಅವು ಬಿಳಿಯಾಗುತ್ತವೆ.

ಇದನ್ನೂ ಓದಿ:30ರ ಹರೆಯದಲ್ಲಿ ಕಾಡುವ ನೆರಿಗೆ ಸಮಸ್ಯೆ; ಇದಕ್ಕಿದೆ ಸರಳ ಪರಿಹಾರ!

ABOUT THE AUTHOR

...view details