ತಿರುವನಂತಪುರ : ಕೇರಳದಲ್ಲಿ ಸಾಂಕ್ರಾಮಿಕ ಜ್ವರದ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಈ ಹಿನ್ನೆಲೆ ಜನರು ಆತಂಕಕ್ಕೆ ಒಳಗಾಗಿದ್ದು, ಚಿಕಿತ್ಸೆಗೆ ಮುಂದಾಗುತ್ತಿದ್ದಾರೆ. ಕಳೆದ 10 ದಿನದಲ್ಲಿ ರಾಜ್ಯದ 10 ಸಾವಿರ ಮಂದಿ ಈ ಸಂಬಂಧ ಚಿಕಿತ್ಸೆ ಪಡೆದಿದ್ದಾರೆ. ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳು ಜನರ ಸಾಲುಗಳಿಂದ ಭರ್ತಿಯಾಗಿದ್ದು, ಜನರು ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, ಖಾಸಗಿ ಆಸ್ಪತ್ರೆಗಳೂ ಇದಕ್ಕೆ ಹೊರತಾಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಅಂಕಿ ಅಂಶಗಳಿಂದ ಗೊತ್ತಾಗಿದೆ.
ಇನ್ನು ರಾಜ್ಯದಲ್ಲಿ ಡೆಂಗ್ಯೂ ಮತ್ತು ಇಲಿ ಜ್ವರಕ್ಕೆ ಇಲ್ಲಿಯವರೆಗೆ 23 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಕೂಡ ಎಚ್ಚರಿಕೆ ಘೋಷಿಸಿದೆ. ಇದರ ಬೆನ್ನಲ್ಲೇ ನಿನ್ನ ಒಂದೇ ದಿನವೇ ಅಂದರೆ ಜೂನ್ 19ರಂದು 13 ಸಾವಿರ ಮಂದಿ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದಾರೆ. 12,984 ಜನರು ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದು, 180 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೂನ್ ಆರಂಭವಾದಾಗಿನಿಂದ ಈ ಸಾಂಕ್ರಾಮಿಕ ಜ್ವರದ ಸೋಂಕಿನಲ್ಲಿ ಹೆಚ್ಚಳ ಕಂಡು ಬಂದಿದೆ. ಜೂನ್ನಲ್ಲಿ ಆರಂಭದಿಂದ ಜೂನ್ 19ರ ವರೆಗೆ 1,61,346 ಮಂದಿ ಚಿಕಿತ್ಸೆ ಪಡೆದಿದ್ದಾರೆ.
ಡೆಂಗ್ಯೂ ಜ್ವರ ಮತ್ತು ಲೆಪ್ಟೊಸ್ಪಿರೋಸಿಸ್ ಹೆಚ್ಚಳ: ರಾಜ್ಯದಲ್ಲಿ ಸಾಂಕ್ರಾಮಿಕ ಜ್ವರದ ಜೊತೆಗೆ ಡೆಂಗ್ಯೂ ಜ್ವರ ಮತ್ತು ಲೆಪ್ಟೊಸ್ಪಿರೋಸಿಸ್ ಕೂಡ ಹೆಚ್ಚಾಗಿದೆ. ನಿನ್ನೆ ಒಂದೇ ದಿನದಲ್ಲಿ 110 ಮಂದಿಯಲ್ಲಿ ಜ್ವರ ದೃಢಪಟ್ಟಿದೆ. 218 ಮಂದಿಯಲ್ಲಿ ಡೆಂಗ್ಯೂ ಶಂಕೆ ವ್ಯಕ್ತವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯದ ಎರ್ನಾಕುಲಂ ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 43 ಜನರಲ್ಲೂ ಡೆಂಗ್ಯೂ ಪತ್ತೆಯಾಗಿದ್ದು, 55 ಜನರು ಚಿಕಿತ್ಸೆ ಪಡೆದಿದ್ದಾರೆ. ಇಲ್ಲಿಯವರೆಗೆ ಅಂದರೆ ಜೂನ್ ಮಾಸದಲ್ಲಿ 1011 ಜನರಲ್ಲಿ ಡೆಂಗ್ಯೂ ಪತ್ತೆಯಾಗಿದೆ.