ನ್ಯೂಯಾರ್ಕ್: ವೇಗವಾಗಿ ಹರಡುತ್ತಿರುವ ಓಮ್ರಿಕಾನ್ನ ಉಪತಳಿ ಜೆಎನ್.1 ಇದೀಗ ಅಮೆರಿಕದಲ್ಲಿ ಪ್ರಬಲಗೊಂಡಿದ್ದು, ಶೇ. 50ರಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ.
ಈ ತಳಿಯು ವೇಗವಾಗಿ ಹರಡುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವೇರಿಯೆಂಟ್ ಆಫ್ ಇಂಟ್ರೆಸ್ಟ್ ಎಂದು ವರ್ಗೀಕರಿಸಿದೆ. ಪ್ರಸ್ತುತ 41 ದೇಶದಲ್ಲಿ ಈ ಸೋಂಕಿದ್ದು, ಮೊದಲ ಬಾರಿಗೆ ಆಗಸ್ಟ್ನಲ್ಲಿ ಲಕ್ಸಂಬರ್ಗ್ನಲ್ಲಿ ಕಾಣಿಸಿಕೊಂಡಿತ್ತು. ಕಳೆದ ಎರಡು ವಾರದಿಂದ ಈ ಸೋಂಕು ವೇಗವಾಗಿ ಹರಡುತ್ತಿದ್ದು, 15-29ರಷ್ಟಿದ್ದ ಪ್ರಮಾಣ 39-50ರಷ್ಟಕ್ಕೆ ಏರಿಕೆಯಾಗಿದೆ. ಜೆಎನ್.1 ಸೋಂಕಿನ ಏರಿಕೆಯಲ್ಲಿ ಹೆಚ್ಚಳಕ್ಕೆ ಪ್ರಯಾಣಿಕರು ಹಾಗೂ ತ್ಯಾಜ್ಯ ನೀರು ಕಾರಣವಾಗಿದೆ. ಹೆಚ್ಚಿನ ಪ್ರದೇಶದಲ್ಲಿ ಜೆಎನ್.1 ಸೋಂಕು ಹರಡುತ್ತಿದೆ.
ಜೆಎನ್.1 ಸೋಂಕು ಬಿಎ.2.86 ರೀತಿಯಿದ್ದು, ಹೆಚ್ಚುವರಿ ರೂಪಾಂತರವನ್ನು ಹೊಂದಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಕುಗ್ಗಿಸುವ ಗುಣಲಕ್ಷಣ ಹೊಂದಿದೆ. ಸೋಂಕು ಹರಡುವಿಕೆಯಲ್ಲಿ ಜೆಎನ್.1 ಪಾಲು ಹೆಚ್ಚಿದೆ. ಅಮೆರಿಕದಲ್ಲಿ ಸದ್ಯ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಸಾರ್ಸ್ ಕೋವ್ 2 ರೂಪಾಂತರದಲ್ಲಿ ಜೆಎನ್.1 ರೂಪಾಂತರವೂ ಶೇ. 39ರಿಂದ 50ರ ಪ್ರಮಾಣವನ್ನು ಹೊಂದಿದೆ ಎಂದು ಸಿಡಿಸಿ ಇತ್ತೀಚಿನ ವರದಿಯಲ್ಲಿ ತಿಳಿಸಿದೆ.
ಎರಡು ವಾರದ ಹಿಂದೆ ಸೋಂಕಿನ ಪ್ರಮಾಣ ಶೇ 15 ರಿಂದ 29ರಷ್ಟಿತ್ತು. ಜೆಎನ್.1 ಬೆಳವಣಿಗೆ ಮುಂದುವರೆದಿದ್ದು, ಈ ತಳಿಯು ಹೆಚ್ಚಿನ ರೂಪಾಂತರ ಹೊಂದಿದೆ. ಜೆಎನ್.1 ಸೋಂಕಿನ ಏರಿಕೆಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಈ ಬಗ್ಗೆ ಶೀಘ್ರವಾಗಿ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಎಕ್ಸ್ಬಿಬಿ.1.5ಗೆ ನೀಡಿದ ಬೂಸ್ಟರ್ ಡೋಸ್ ಜೆಎನ್.1 ವಿರುದ್ಧ ಹೋರಾಡಲಿದೆ ಎಂದು ಅಮೆರಿಕದ ಪಿಸಿಶಿಯನ್- ವಿಜ್ಞಾನಿ ಎರಿಕ್ ಟೊಪೊಲ್ ತಿಳಿಸಿದರು.
ಜೆಎನ್.1 ಜಾಗತಿಕವಾಗಿ ಪ್ರಾಬಲ್ಯದ ಹೊಂದಿರುವುದು ಸೋಂಕಿನ ಹೆಚ್ಚಳಕ್ಕೆ ಕಾರಣವಾಗಿದೆ. ಜೊತೆಗೆ ಕೆಲವು ದೇಶಗಳಲ್ಲಿ ಆಸ್ಪತ್ರೆಗೆ ದಾಖಲು ಮತ್ತು ಸಾವಿಗೆ ಕಾರಣವಾಗುತ್ತಿದೆ. ಡಬ್ಲ್ಯೂಎಚ್ಒ ಪ್ರಕಾರ, ಹೊಸ ಕೋವಿಡ್ 19 ಪ್ರಕರಣಗಳು ಕಳೆದೊಂದು ತಿಂಗಳಿನಿಂದ ಜಾಗತಿಕವಾಗಿ ಶೇ 52ರಷ್ಟು ಹೆಚ್ಚಳವಾಗಿದೆ. ವಿಶ್ವಸಂಸ್ಥೆ ಆರೋಗ್ಯ ಮಂಡಳಿ ಕೂಡ ಆಸ್ಪತ್ರೆಗಳಲ್ಲಿ, ಐಸಿಯುಗೆ ದಾಖಲಾಗುವವರು ಮತ್ತು ಜಾಗತಿಕ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದಿದೆ.
ಈ ಜೆಎನ್.1 ಸೋಂಕು ಭಾರತದಲ್ಲೂ ಏರಿಕೆ ಕಾಣುತ್ತಿದ್ದು, 692 ಹೊಸ ಕೋವಿಡ್ ಪ್ರಕರಣಗಳು ಕಂಡು ಬಂದಿದೆ. ಒಟ್ಟಾರೆ ಸಕ್ರಿಯ ಕೋವಿಡ್ ಪ್ರಕರಣಗಳು 4,097ರಷ್ಟಿದೆ ಎಂದು ಮಂಗಳವಾರ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಜೀವಿಗಳ ಪ್ರತಿರಕ್ಷಣಾ ವ್ಯವಸ್ಥೆ ತಡೆ ಹಿಡಿಯುವ ಕೋವಿಡ್ ಪ್ರೋಟಿನ್ ಪತ್ತೆ