ಬೆಂಗಳೂರು: ಶೇ 76ರಷ್ಟು ಭಾರತೀಯರು ಆರೋಗ್ಯ ಆಯ್ಕೆಯ ವಿಚಾರದಲ್ಲಿ ಅದರಲ್ಲೂ ವಿಶೇಷವಾಗಿ ತೂಕ ನಷ್ಟದ ಗುರಿಯಲ್ಲಿ ಸಾಮಾಜಿಕ ಜಾಲತಾಣ ಅಥವಾ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ಕುಟುಂಬಸ್ಥರು ಮತ್ತು ಸ್ನೇಹಿತರು, ಸಹೋದ್ಯೋಗಿಗಳಿಂದ ಪ್ರಭಾವಿತರಾಗುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
ವಿಶ್ವ ಆಹಾರ ದಿನದ ಹಿನ್ನೆಲೆಯಲ್ಲಿ ಸ್ಟೇಟ್ ಆಫ್ ಯುವರ್ ಪ್ಲೇಟ್ (ನಿಮ್ಮ ತಟ್ಟೆಯ ಮನಸ್ಥಿತಿ) ಎಂಬ ಹೆಸರಿನಲ್ಲಿ ಫಿಟ್ನೆಸ್ ತಂತ್ರಜ್ಞಾನ ಆ್ಯಪ್ ಆದ ಪಿಟೆಲೊ 5000 ಜನರ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಶೇ 58ರಷ್ಟು ಭಾರತೀಯರು ತಮ್ಮ ಬಟ್ಟೆಯ ಗಾತ್ರ ಹೆಚ್ಚಾದ ಸಮಯದಲ್ಲಿ ಮಾತ್ರ ತಮ್ಮ ತೂಕದ ಬಗ್ಗೆ ಚಿಂತಿಸುತ್ತಾರೆ. ಶೇ 46ರಷ್ಟು ಮಂದಿ ತಮ್ಮ ಕುಟುಂಬಸ್ಥರು, ಸ್ನೇಹಿತರು ದೇಹದ ತೂಕದ ಬಗ್ಗೆ ಟೀಕಿಸಿದಾಗ ಮಾತ್ರ ತಮ್ಮ ತಿನ್ನುವ ಅಭ್ಯಾಸದ ಬಗ್ಗೆ ಕಾಳಜಿವಹಿಸುತ್ತಾರೆ ಎಂದು ತಿಳಿದುಬಂದಿದೆ.
18ರಿಂದ 63 ವರ್ಷದ ಎಲ್ಲಾ ವಯೋಮಾನದವರ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಬಹುತೇಕರು ಅಂದರೆ ಶೇ 90ರಷ್ಟು ಮಂದಿ ಮಿಲೆನ್ನಿಯಲ್ ಮತ್ತು ಜೆನ್ ಜೆಡ್ ವರ್ಗದವರಿದ್ದಾರೆ. ಇನ್ನು ಶೇ 77ರಷ್ಟು ಮಹಿಳೆಯರು ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಮೀಕ್ಷೆಯ ಫಲಿತಾಂಶವೂ ಭಾರತದಲ್ಲಿ ಹಬ್ಬದ ಋತುಮಾನದ ಆರಂಭಗಳ ಮುನ್ನ ಹೊರಬಂದಿದೆ. ಈ ವೇಳೆ ಕುಟುಂಬಗಳ ಒಟ್ಟು ಸೇರುವಿಕೆ (ಗೆಟ್ ಟು ಗೆದರು) ಶೇ 57ರಷ್ಟು, ಕೌಟುಂಬಿಕ ಕಾರ್ಯಕ್ರಮಗಳು ಶೇ 44ರಷ್ಟು ಮತ್ತು ಒತ್ತಡದ ಸಮಯ ಶೇ 35ರಷ್ಟಿದ್ದು, ಇದು ಮೂರು ಪ್ರಮುಖ ಕಷ್ಟದ ಸಮಯವಾಗಿದ್ದು, ಭಾವನಾತ್ಮಕ ಆಹಾರಕ್ಕೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ತಮ್ಮ ಆರೋಗ್ಯದ ಗುರಿಗಳನ್ನು ಬಿಟ್ಟುಕೊಡಲು ಒಪ್ಪಿಕೊಂಡಿರುವುದಾಗಿ ಭಾಗಿದಾರರು ಹೇಳಿದ್ದಾರೆ.