ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ವಯಸ್ಕರು, ಮಕ್ಕಳಲ್ಲಿ ಜ್ವರ (ವೈರಲ್ ಫೀವರ್) ಕಂಡು ಬರುವುದು ಸಹಜವಾಗಿದೆ. ಋತುಮಾನ ಬದಲಾದಂತೆ ಗಾಳಿಯಲ್ಲಿ ಹರಡುವ ಸೋಂಕುಗಳು ಜ್ವರಕ್ಕೆ ಕಾರಣವಾಗುತ್ತವೆ. ನಾವು ಉಸಿರಾಡುವ ಗಾಳಿಯೂ ಸಾಮಾನ್ಯ ಜ್ವರ, ನೆಗಡಿ ಮತ್ತು ಕೆಮ್ಮಿಗೆ ಕಾರಣವಾಗುತ್ತದೆ. ಸಾಮಾನ್ಯ ಜ್ವರಕ್ಕೆ ಉತ್ತಮ ಆಹಾರ ಸೇವನೆ, ವಿಶ್ರಾಂತಿ ಅವಶ್ಯಕ. ಇನ್ನು ಮನೆಯಲ್ಲೇ ಸಿಗುವ ಔಷಧಗಳ ಮೂಲಕ ಈ ಸಾಮಾನ್ಯ ಜ್ವರ ನಿವಾರಣೆ ಮಾಡಬಹುದಾಗಿದ್ದು, ಅಂತಹ ಕೆಲವು ಮನೆ ಮದ್ದುಗಳು ಇಲ್ಲಿವೆ.
ಶುಂಠಿ ಚಹಾ: ನೋವು ಶಮನ ಮತ್ತು ಜ್ವರದ ಸೋಂಕಿನ ಕಡಿಮೆ ಮಾಡುವಲ್ಲಿ ಶುಂಠಿ ಅದ್ಭುತ ಪ್ರಭಾವ ಬೀರುತ್ತದೆ. ಇದು ಆ್ಯಂಟಿ ಇನ್ಫಾಮೆಟರಿ, ರೋಗ ನಿರೋಧಕ ಮತ್ತು ನೋವು ನಿರೋಧಕರ ಸಾಮರ್ಥ್ಯ ಹೊಂದಿದೆ. ಶುಂಠಿ ಚಹಾದೊಂದಿಗೆ ಜೇನು ತುಪ್ಪ ಸೇವಿಸುವುದು ಒಳ್ಳೆಯದು. ಜೇನು ತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ಕೆಮ್ಮು ಮತ್ತು ಸೋಂಕುಗಳ ತೀವ್ರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜ್ವರದಿಂದ ಮುಕ್ತಿ ಹೊಂದಲು ಪ್ರತಿನಿತ್ಯ ಕನಿಷ್ಟ ಐದು ಬಾರಿ ಶುಂಠಿ ಮಿಶ್ರಿತ ಬಿಸಿನೀರು ಸೇವನೆ ಉತ್ತಮ. ಇದರಲ್ಲಿ ತುಪ್ಪ ಸೇವಿಸುವುದನ್ನು ಮರೆಯಬೇಡಿ.
ಕರಿ ಮೆಣಸು: ನೋವು ಶಮನ ಮತ್ತು ಸಮತೋಲನತೆಯ ಪರಿಣಾಮವನ್ನು ಈ ಕರಿ ಮೆಣಸು ಹೊಂದಿದೆ. ಆಯುರ್ವೇದದಲ್ಲಿ ಕರಿ ಮೆಣಸು ಬಹು ಉಪಯುಕ್ತ ಪದಾರ್ಥವಾಗಿ ಬಳಕೆ ಮಾಡಲಾಗುವುದು. ಜೀವವಿರೋಧಿ ಮತ್ತು ಪ್ರತಿಜೀವಕ ಗುಣಲಕ್ಷಣಗಳ ವಿರುದ್ದ ಹೋರಾಡಿ ನಿಮ್ಮ ಉಸಿರಾಟದ ವ್ಯವಸ್ಥೆಯನ್ನಿದು ಸಾರಾಗವಾಗುವಂತೆ ಮಾಡುತ್ತದೆ. ಅಲ್ಲದೇ, ಇದರಲ್ಲಿನ ಅತಿ ಹೆಚ್ಚಿನ ವಿಟಮಿನ್ ಸಿ ಗುಣ ಬಲವಾದ ರೋಗ ನಿರೋಧಕ ಶಕ್ತಿ ಮತ್ತು ರೋಗದ ವಿರುದ್ಧ ಹೋರಾಡಲು ಸಹಕಾರಿ.