ಬೆಂಗಳೂರು: ದುಬಾರಿ ಬೆಲೆ ಎಂಬ ಕಾರಣಕ್ಕೆ ಸಾಕಷ್ಟು ಬಡ ರೋಗಿಗಳು ಸಕಾಲಕ್ಕೆ ಹೃದ್ರೋಗಕ್ಕೆ ಚಿಕಿತ್ಸೆ ಪಡೆಯಲು ವಿಫಲರಾಗುತ್ತಿದ್ದಾರೆ. ಆದರೆ ಇಂಥವರ ಪಾಲಿಗೆ ಮುಂದಿನ ದಿನಗಳಲ್ಲಿ ಕಡಿಮೆ ಬೆಲೆಗೆ ಗುಣಮಟ್ಟದ ಚಿಕಿತ್ಸೆ ಲಭಿಸುವ ನಿರೀಕ್ಷೆ ಮೂಡುತ್ತಿದೆ.
ಭಾರತ ಹೃದ್ರೋಗಿಗಳ ರಾಜಧಾನಿ.. ಹೃದಯ ಸಂಬಂಧಿ ಸಮಸ್ಯೆ ಹಾಗೂ ಸಕಾಲಕ್ಕೆ ಚಿಕಿತ್ಸೆ ಸಿಗದೇ ಇರುವುದು ಮತ್ತು ಅತ್ಯಂತ ಪ್ರಮುಖವಾಗಿ ಹಣದ ಸಮಸ್ಯೆ ಹಿನ್ನೆಲೆ ಸಕಾಲಕ್ಕೆ ಬಡವರು ಹೃದಯ ಚಿಕಿತ್ಸೆಗೆ ಒಳಗಾಗದಿರುವುದು ಸಾವು ನೋವು ಹೆಚ್ಚಳಕ್ಕೆ ಕಾರಣವಾಗಿದೆ. ಭಾರತ ದೇಶ ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಹೃದ್ರೋಗಿಗಳ ಸಾವಿನ ಅಂಕಿ ಅಂಶವನ್ನು ಹೊಂದಿದೆ. ಹೃದ್ರೋಗಿಗಳ ವಿಶ್ವದ ರಾಜಧಾನಿ ಎಂದು ಭಾರತ ಕರೆಸಿಕೊಳ್ಳುತ್ತಿದೆ.
ಇದಕ್ಕೆ ಕಾರಣ ಜನರ ಬಡತನ ಹಾಗೂ ದುಬಾರಿ ಚಿಕಿತ್ಸೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಹಂತ ಹಂತವಾಗಿ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮ ಕೈಗೊಳ್ಳುತ್ತಿವೆ. ಆದರೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚದ ಅಜಗಜಾಂತರ ಸರಿದೂಗಿಸುವ ಕಾರ್ಯ ಮಾತ್ರ ಸಾಧ್ಯವಾಗುತ್ತಿಲ್ಲ.
ಸ್ಟಾರ್ಟ್ಅಪ್, ಮೇಕ್ ಇನ್ ಇಂಡಿಯಾದಲ್ಲಿ ಹೊಸತನ.. ಆದರೆ ಕಳೆದ ಎರಡು ವರ್ಷಗಳಿಂದೇಚೆಗೆ ಆರೋಗ್ಯ ಕ್ಷೇತ್ರಗಳಲ್ಲಿಯೂ ಸ್ಟಾರ್ಟ್ ಅಪ್ ಇಂಡಿಯಾ ಹಾಗೂ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ಸಾಕಷ್ಟು ಹೊಸತನಗಳ ಅಳವಡಿಕೆ ಆಗುತ್ತಿದೆ. ಹೊಸ ಕಂಪನಿಗಳು ಆರೋಗ್ಯ ಕ್ಷೇತ್ರದಲ್ಲಿ ಸ್ಥಾಪನೆಗೊಳ್ಳುತ್ತಿದ್ದು ದೇಶ ವಿದೇಶಗಳನ್ನು ಅವಲಂಬಿಸಿದ್ದ ಚಿಕಿತ್ಸಾ ಪದ್ಧತಿ ಇತ್ತು. ಈಗ ಅದು ದೇಶಿಯ ಆಗುತ್ತಿದೆ. ವಿವಿಧ ಹಂತದ ಚಿಕಿತ್ಸೆಗೆ ವಿದೇಶದ ಪರಿಕರಗಳನ್ನು ಅವಲಂಬಿಸಿದ್ದ ಭಾರತ ಇದೀಗ ನಿಧಾನವಾಗಿ ಸ್ವಾವಲಂಬಿ ಆಗುತ್ತಿದೆ. ಇವುಗಳಲ್ಲಿ ಒಂದು ವಾಲ್ವ್ ಅಳವಡಿಕೆ.
ಹೃದಯ ಸಂಬಂಧಿ ಸಮಸ್ಯೆ ಅನುಭವಿಸುತ್ತಿರುವವರಿಗೆ ವಾಲ್ವ್ ಅಳವಡಿಸುವುದು ಸರ್ವೇ ಸಾಮಾನ್ಯ. ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುವವರು ಹಾಗೂ ಇತರೆ ಆಧುನಿಕ ವಿಧಾನಗಳ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ರಕ್ತನಾಳಗಳು ಬ್ಲಾಕ್ ಆದ ಭಾಗದಲ್ಲಿ ವಾಲ್ವ್ ಅಳವಡಿಸುವುದು ಸಾಮಾನ್ಯ. ಇದಕ್ಕಾಗಿ ಇದುವರೆಗೂ ಭಾರತ ಯುರೋಪ್ ಸೇರಿದಂತೆ ವಿವಿಧ ಅಭಿವೃದ್ಧಿತ ರಾಷ್ಟ್ರಗಳನ್ನು ಅವಲಂಬಿಸಿತ್ತು. ಈಗೀಗ ಈ ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧಿಸಲಾಗುತ್ತಿದೆ. ವಿದೇಶಗಳಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ತರುತ್ತಿದ್ದ ವಾಲ್ಟ್ಗಳನ್ನು ದೇಶದಲ್ಲಿಯೇ ಅಭಿವೃದ್ಧಿ ಪಡಿಸಲಾಗುತ್ತಿದೆ.