ವಾಷಿಂಗ್ಟನ್: ನವಜಾತ ಶಿಶುಗಳನ್ನು ಉಸಿರಾಟದ ಸಿನ್ಸಿಟಿಯಲ್ ವೈರಸ್ (ಆರ್‌ಎಸ್‌ವಿ)ಯಿಂದ ರಕ್ಷಣೆ ಮಾಡುವ ಮೊದಲ ಲಸಿಕೆಗೆ ಅಮೆರಿಕದ ಫುಡ್ ಅಂಡ್ ಡ್ರಗ್ ಆಡ್ಮಿನಿಸ್ಟ್ರೇಷನ್ (ಎಫ್ಡಿಎ) ಅನುಮೋದನೆ ನೀಡಿದೆ ಎಂದು ಅಂತಾರಾಷ್ಟ್ರೀಯ ಆಂಗ್ಲ ದೈನಿಕವೊಂದು ವರದಿ ಮಾಡಿದೆ. ಈ ಲಸಿಕೆಯನ್ನು ಫೈಜರ್ ತಯಾರಿಸಿದ್ದು, ಕಡೆಯ ಹಂತದ ಗರ್ಭಾವಧಿಯಲ್ಲಿ ತಾಯಿಗೆ ಈ ಲಸಿಕೆಯನ್ನು ನೀಡುವ ಮೂಲಕ ಮಗುವನ್ನು ಹುಟ್ಟಿನ ಮೊದಲ ಆರು ತಿಂಗಳ ಕಾಲ ಈ ಸೋಂಕಿನಿಂದ ರಕ್ಷಿಸಬಹುದಾಗಿದೆ.
ಈ ಲಸಿಕೆ ಪ್ರಯೋಗದ ವೇಳೆ 7 ಸಾವಿರ ಗರ್ಭಿಣಿಯರಿಗೆ ಈ ಲಸಿಕೆ ನೀಡಲಾಗಿದೆ. ಈ ಲಸಿಕೆಗೆ ಅಬ್ರಿಸ್ಟೊ ಎಂದು ಹೆಸರಿಡಲಾಗಿದೆ. ಈ ಲಸಿಕೆಯು ನವಜಾತ ಶಿಶುಗಳು ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ತಪ್ಪಿಸುತ್ತದೆ.
ಆರ್‌ಎಸ್‌ವಿ ಎಂಬುದು ಸಾಮಾನ್ಯ ಅನಾರೋಗ್ಯವಾಗಿದ್ದು, ನವಜಾತ ಶಿಶುಗಳನ್ನು ಪ್ರತಿವರ್ಷ ಆಸ್ಪತ್ರೆಗೆ ದಾಖಲಾಗುವಂತೆ ಮಾಡುವ ಪ್ರಮುಖ ಸಮಸ್ಯೆಯಾಗಿದೆ. ಅದರಲ್ಲೂ ಚಳಿಗಾಲದಲ್ಲಿ ಶಿಶುಗಳಲ್ಲಿ ಈ ಸಮಸ್ಯೆ ಹೆಚ್ಚು ಕಾಡುತ್ತದೆ. ಕಡೆಯ ಆರ್‌ಎಸ್‌ವಿ ಸೀಸನ್ ದೀರ್ಘವಾಗಿದ್ದು, ಸಾಮಾನ್ಯಕ್ಕಿಂತ ಹೆಚ್ಚು ಗಂಭೀರವಾಗಿ ಇರುತ್ತದೆ.
ಎಫ್ಡಿಎ ಕೇಂದ್ರ ನಿರ್ದೇಶಕರಾದ ಪೀಟರ್ ಮಾರ್ಕ್ ಈ ಲಸಿಕೆ ಕುರಿತು ಮಾತನಾಡಿದ್ದು, ಆರ್‌ಎಸ್‌ವಿ ಎಂಬುದು ಮಕ್ಕಳಲ್ಲಿ ಕಾಡುವ ಸಾಮಾನ್ಯ ಅನಾರೋಗ್ಯವಾಗಿದೆ. ನವಜಾತ ಶಿಶುಗಳ ಇದರ ಗಂಭೀರ ಅಪಾಯಕ್ಕೆ ಒಳಗಾಗುವಂತೆ ಮಾಡುತ್ತದೆ. ಇದರಿಂದ ಅವರು ಆಸ್ಪತ್ರೆಗೆ ದಾಖಲಾಗುವ ಸಂಭವ ಹೆಚ್ಚಿರುತ್ತದೆ.