ವಾಷಿಂಗ್ಟನ್ ಡಿಸಿ (ಅಮೆರಿಕ): ಸಂಶೋಧಕರು ಮೈಕ್ರೋಸ್ಕೋಪ್ ಸ್ಕ್ಯಾನಿಂಗ್ ಮತ್ತು ವಿಶ್ಲೇಷಣಾ ವ್ಯವಸ್ಥೆಯು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಅದನ್ನು ಈಗಾಗಲೇ ಪರೀಕ್ಷಿಸಿ, ಕಾರ್ಯಗತಗೊಳಿಸಲಾಗಿದೆ ಮತ್ತು ಈ ತಂತ್ರಜ್ಞಾನವನ್ನು ವಿಶ್ವಾದ್ಯಂತ ಪರಿಚಯಿಸಲು ಸಂಶೋಧಕರು ಅಣಿಯಾಗಿದ್ದಾರೆ.
ಈ ಬಗ್ಗೆ ಯುಕ್ಯೂ ಪ್ರೊಫೆಸರ್ ಎಐ ಬ್ರಿಯಾನ್ ಲೊವೆಲ್ ಪ್ರತಿಕ್ರಿಯಿಸಿ, ಈ ತಂತ್ರಜ್ಞಾನ ವ್ಯವಸ್ಥೆಯು ವಿವಿಧ ಪರೀಕ್ಷೆಗಳನ್ನು ನಡೆಸಲು ಗುಣಮಟ್ಟ ಮತ್ತು ವೇಗದ ದೃಷ್ಟಿಯಿಂದ ಗಮನಾರ್ಹವಾಗಿದೆ. ಈ ಡಿಜಿಟಲ್ ಪ್ಯಾಥೋಲಜಿ ತಂತ್ರಜ್ಞಾನವು ದಿನಕ್ಕೆ ಸಾವಿರಾರು ಪರೀಕ್ಷೆಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ ಮತ್ತು ನ್ಯಾಷನಲ್ ಅಸೋಸಿಯೇಷನ್ ಆಫ್ ಟೆಸ್ಟಿಂಗ್ ಅಥಾರಿಟೀಸ್ (NATA) ನಿಂದ ಮಾನ್ಯತೆ ಪಡೆದಿದೆ ಎಂದು ಹೇಳಿದರು.
ಈ ವ್ಯವಸ್ಥೆಯು ರೋಗಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳ ಕೆಲಸದ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸುತ್ತದೆ. ಜೊತೆಗೆ ಟೆಲಿಪಥಾಲಜಿ ಮೂಲಕ ಪರೀಕ್ಷೆಯ ಬಗ್ಗೆ ಎರಡನೇ ಅಭಿಪ್ರಾಯ ಪಡೆಯುವ ಸಾಮರ್ಥ್ಯ ಸಹ ಒದಗಿಸುತ್ತದೆ ಮತ್ತು ದಾಖಲೆಗಳ ನಿರ್ವಹಣೆಯನ್ನು ಸುಧಾರಿಸುತ್ತದೆ. ಈ ತಂತ್ರಜ್ಞಾನದಿಂದ ಗಾಜಿನ ಸ್ಲೈಡ್‌ಗಳನ್ನು ವರ್ಷಗಳವರೆಗೆ ಆರ್ಕೈವ್ ಮಾಡುವ ಅಗತ್ಯವಿಲ್ಲ ಎಂದರು.
ಹೆಲ್ತ್ಕೇರ್ ಕ್ಷೇತ್ರದಲ್ಲಿ ಗೇಮ್ ಚೇಂಜರ್:ಎಸ್ಎನ್ಪಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಮೈಕೆಲ್ ಹ್ಯಾರಿಸನ್ ಮಾತನಾಡಿ, ಈ ತಂತ್ರಜ್ಞಾನ ಹೆಲ್ತ್ಕೇರ್ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗಲಿದೆ. ಬ್ರಿಸ್ಬೇನ್‌ನಲ್ಲಿರುವ ಎಸ್ಎನ್ಪಿ ಪ್ರಯೋಗಾಲಯಗಳು ಈಗಾಗಲೇ ರೋಗನಿರ್ಣಯದ ವೇಗ ಮತ್ತು ನಿಖರತೆಯನ್ನು ತಿಳಿಯಲು ಈ ವ್ಯವಸ್ಥೆ ಬಳಸುತ್ತಿವೆ. ನಮ್ಮ ವಿಜ್ಞಾನಿಗಳು ಈಗ ಅನೇಕ ಗಂಟೆಗಳ ಕಾಲ ಸೂಕ್ಷ್ಮದರ್ಶಕವನ್ನು ಉಪಯೋಗಿಸುವುದರ ಬದಲಾಗಿ ಎಐನೊಂದಿಗೆ ಡಿಜಿಟಲೀಕರಿಸಿದ ಚಿತ್ರವನ್ನು ಬಳಸುತ್ತಾರೆ. ಇದು ವಿಜ್ಞಾನ ಪರೀಕ್ಷೆಗಳ ಕಾರ್ಯಕ್ಷಮತೆಯಲ್ಲಿ ಅತ್ಯಂತ ಮಹತ್ವದ ಬದಲಾವಣೆಯಾಗಿದೆ ಎಂದು ತಿಳಿಸಿದರು.