ನವದೆಹಲಿ: 2021ಕ್ಕೆ ಹೋಲಿಸಿದರೆ 2022 ರಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ ಶೇಕಡಾ 12.5 ರಷ್ಟು ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿಯಿಂದ ಮಾಹಿತಿ ಬಹಿರಂಗವಾಗಿದೆ
2022 ರಲ್ಲಿ 32,457 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದು ಹಿಂದಿನ ವರ್ಷ (2021) ದಾಖಲಾದ 28,413 ಸಾವಿನ ಪ್ರಕರಣಗಳಿಂದ ಗಣನೀಯವಾಗಿ ಹೆಚ್ಚಳವಾಗಿದೆ. ಕೋವಿಡ್ 19 ನಂತರ, ಸಾವನ್ನಪ್ಪುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಕೋರೋನಾ ವೈರಸ್ ಪರಿಣಾಮ ಹೃದಯ ಸಂಬಂಧಿ ಕಾಯಿಲೆಗಳನ್ನು ಹೊಂದಿರುವವರು ಮೃತಪಟ್ಟಿರುವ ಬಗ್ಗೆ ಹಲವು ಅಧ್ಯಯನಗಳಿಂದ ತಿಳಿದು ಬಂದಿದೆ.
ಏನು ಹೇಳುತ್ತೆ ಎನ್‌ಸಿಆರ್‌ಬಿ ವರದಿ?:ಎನ್‌ಸಿಆರ್‌ಬಿ ವರದಿಯ ಅಂಕಿ- ಅಂಶಗಳ ಪ್ರಕಾರ, 2022 ರಲ್ಲಿ ಹಠಾತ್ ಸಾವಿನ ಪ್ರಕರಣಗಳ ಪ್ರಮಾಣವೂ ಹೆಚ್ಚಾಗಿದೆ. 2022 ರಲ್ಲಿ ಮಾತ್ರ ಹಠಾತ್ ಸಾವಿನ ಪ್ರಕರಣಗಳ ಒಟ್ಟು ಸಂಖ್ಯೆಯು 56,450 ಆಗಿದೆ. ಹಿಂದಿನ ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ, 2022 ರಲ್ಲಿ ಮೃತಪಟ್ಟವರ ಸಂಖ್ಯೆಯು ತುಂಬಾ ಏರಿಕೆ ಕಂಡಿರುವುದು ಬಗ್ಗೆ ವರದಿ ಮಾಹಿತಿ ನೀಡುತ್ತದೆ.
ಎನ್‌ಸಿಆರ್‌ಬಿ ಹಠಾತ್ ಮರಣವನ್ನು ''ತತ್‌ಕ್ಷಣದ ಅಥವಾ ಹಿಂಸಾಚಾರವನ್ನು ಹೊರತುಪಡಿಸಿ ಯಾವುದೇ ಕಾರಣದಿಂದ ಕೆಲವೇ ನಿಮಿಷಗಳಲ್ಲಿ ಸಂಭವಿಸುವ ಅನಿರೀಕ್ಷಿತ ಸಾವು'' (ಹೃದಯಾಘಾತ, ಮೆದುಳಿನ ರಕ್ತಸ್ರಾವ ಸೇರಿದಂತೆ ಇತರ ಹಠಾತ್ ಸಾವಿನ ಪ್ರಕರಣಗಳು)" ಎಂದು ವಿವರಿಸುತ್ತದೆ. ಅರದಲ್ಲೂ ಹೃದಯಾಘಾತದ ಸಾವಿನ ಪ್ರಕರಣಗಳು ಗಣನೀಯ ಏರಿಕೆಯಾಗಿದೆ. 2020ರಲ್ಲಿ 28,579 ಹಾಗೂ 2021 ರಲ್ಲಿ ಹೃದಯಾಘಾತದಿಂದ 28,413 ಜನರು ಸಾವನ್ನಪ್ಪಿದ್ದಾರೆ. ಇನ್ನು 2022 ರಲ್ಲಿ ಈ ಸಂಖ್ಯೆಯು 32,457ಕ್ಕೆ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.
ಆರೋಗ್ಯ ತಜ್ಞರ ಸಲಹೆ:ಹೆಚ್ಚಿನ ಸೋಡಿಯಂ ಆಹಾರ, ವ್ಯಾಯಾಮದ ಕೊರತೆ, ಧೂಮಪಾನ, ಅತಿಯಾದ ಮದ್ಯಪಾನ, ಜಡ ಜೀವನಶೈಲಿ ಸೇರಿದಂತೆ ವಿವಿಧ ಕಾರಣಗಳು ಹೃದಯಾಘಾತದ ಅಪಾಯ ಹೆಚ್ಚಿಸುವ ಹಲವಾರು ಅಂಶಗಳಾಗಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ, ಹೆಚ್ಚಿನ ಹಿಮೋಗ್ಲೋಬಿನ್ ಮಟ್ಟಗಳು ನಿಮ್ಮ ಹೃದಯಾಘಾತ, ಪಾರ್ಶ್ವವಾಯು ಮತ್ತು ರಕ್ತ ಹೆಪ್ಪುಗಟ್ಟುವಿಕೆ ಅಪಾಯವನ್ನು ಹೆಚ್ಚಿಸಬಹುದು. ಇದನ್ನು ಪಾಲಿಸಿಥೆಮಿಯಾ ಎಂದು ಹೇಳಲಾಗುತ್ತದೆ. ಮೂಳೆ ಮಜ್ಜೆಯಲ್ಲಿನ ಅಸಹಜತೆಗಳಿಂದಾಗಿ ಮಾನವ ದೇಹದಲ್ಲಿ ಕೆಂಪು ರಕ್ತ ಕಣಗಳು ಹೆಚ್ಚಾಗುವ ಸ್ಥಿತಿ ಕಂಡು ಬರುತ್ತದೆ. ಈ ಹೆಚ್ಚುವರಿ ಜೀವಕೋಶಗಳು ರಕ್ತವನ್ನು ದಪ್ಪವಾಗಿಸುತ್ತದೆ. ರಕ್ತಪರಿಚಲನೆ ನಿಧಾನಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯವಾಗುತ್ತದೆ.
ಹೆಚ್ಚಿನ ಹಿಮೋಗ್ಲೋಬಿನ್ ಮಟ್ಟವನ್ನು ನಿರ್ಲಕ್ಷಿಸಬೇಡಿ:"ಹೆಚ್ಚಿನ ಹಿಮೋಗ್ಲೋಬಿನ್ ಮಟ್ಟವನ್ನು ನಿರ್ಲಕ್ಷಿಸಬಾರದು. ಏಕೆಂದರೆ, ಇದು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ಪಾರ್ಶ್ವವಾಯು, ಹೃದಯಾಘಾತ ಮತ್ತು ಕಾಲುಗಳು ಮತ್ತು ಹೊಟ್ಟೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಂತಹ ಅಪಾಯಕಾರಿ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ'' ಎಂದು ಗುರುಗ್ರಾಮದ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಯ ಹೆಮಟಾಲಜಿ ಮತ್ತು ಮೂಳೆ ಮಜ್ಜೆಯ ಕಸಿ ವಿಭಾಗದ ಪ್ರಧಾನ ನಿರ್ದೇಶಕ ಡಾ.ರಾಹುಲ್ ಭಾರ್ಗವ ಹೇಳಿದ್ದಾರೆ.
ಇದನ್ನೂ ಓದಿ:ನಿದ್ರೆ ಬಗ್ಗೆ ತಪ್ಪು ಕಲ್ಪನೆ ಬೇಡ; ಅಸಲಿ ವಿಷಯ ತಿಳಿಯಿರಿ