ಹೈದರಾಬಾದ್:ಕೋವಿಡ್-19ನ ಪತ್ತೆಯಾಗಿ ಒಂದು ವರ್ಷ ಕಳೆದಿದ್ದರೂ, ವೈರಸ್‌ನ ಭಯ ಇನ್ನೂ ಜನರ ಮನಸ್ಸಿನಲ್ಲಿ ಉಳಿದಿದೆ. ಆರಂಭದಲ್ಲಿ ಹೆಚ್ಚಿನ ಸೋಂಕಿತರು ಸಾಯುತ್ತಿದ್ದರು, ಆದರೆ, ಈಗ ವೈದ್ಯರು ರೋಗವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಅರ್ಥಮಾಡಿಕೊಂಡಿದ್ದು, ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.
ಕೊರೊನಾ ವೈರಸ್‌ನ ಪರಿಣಾಮಗಳು ವೈದ್ಯರು ಮತ್ತು ಸಂಶೋಧಕರನ್ನು ಚಿಂತೆಗೀಡುಮಾಡುತ್ತಿವೆ. ವೈರಸ್‌ನ ಬದಲಾಗುತ್ತಿರುವ ರಚನೆ, ಅದರ ರೋಗಲಕ್ಷಣಗಳಲ್ಲಿನ ವ್ಯತ್ಯಾಸ ಮತ್ತು ದೇಹದ ಮೇಲೆ ಉಂಟಾಗುವ ಪರಿಣಾಮಗಳಿಂದಾಗಿ, ಶೀಘ್ರದಲ್ಲೇ ಕೋವಿಡ್-19 ವಿರುದ್ಧ ವ್ಯಾಕ್ಸಿನೇಷನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಘೋಷಿಸಲಾಗಿದ್ದರೂ, ಜನರು ಈ ಲಸಿಕೆಯ ಪರಿಣಾಮಕಾರಿತ್ವ ಅನುಮಾನಿಸಲು ಪ್ರಾರಂಭಿಸಿದ್ದಾರೆ.
ಕೋವಿಡ್-19 ಮತ್ತು ಅದರ ಪರಿಣಾಮಗಳು ದೇಹದ ಬಹುತೇಕ ಎಲ್ಲ ಭಾಗಗಳಲ್ಲಿ ಕೆಲವು ಗಂಭೀರ ಪರಿಣಾಮ ಬೀರುತ್ತಿದೆ. ಇದು ಉಸಿರಾಟದ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆ ಅಥವಾ ನರಮಂಡಲದ ಮೇಲೂ ತೀವ್ರವಾಗಿ ಪರಿಣಾಮ ಬೀರುತ್ತವೆ. ಆದರೆ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ.
ಕೋವಿಡ್-19 ಸಾಂಕ್ರಾಮಿಕ:
ಕೋವಿಡ್ -19ನ ಮೊದಲ ಪ್ರಕರಣ ಚೀನಾದ ವುಹಾನ್ ನಗರದಲ್ಲಿ ವರದಿಯಾಗಿದ್ದು, ಇದು ಕ್ರಮೇಣ ಇತರ ದೇಶಗಳಲ್ಲಿ ಹರಡಲು ಪ್ರಾರಂಭಿಸಿತು. ಜನರು ಪ್ರಯಾಣಿಸುತ್ತಿದ್ದಂತೆ ಇದು ಪ್ರಪಂಚದಾದ್ಯಂತ ಹಾನಿಯನ್ನುಂಟು ಮಾಡಿತು. ಈ ರೋಗವನ್ನು ಆರಂಭದಲ್ಲಿ 'SARS-CoV-2' ಎಂದು ಹೆಸರಿಸಲಾಯಿತು. ಬಳಿಕ ಇದನ್ನು ಕೋವಿಡ್ -19 ಅಥವಾ ಕೊರೊನಾ ವೈರಸ್ ಕಾಯಿಲೆ ಎಂದು ಕರೆಯಲಾಯಿತು.
ಆರಂಭದಲ್ಲಿ, ಕೆಮ್ಮು, ಶೀತ ಮತ್ತು ಅಧಿಕ ಜ್ವರವನ್ನು ಕೊರೊನಾದ ಲಕ್ಷಣಗಳೆಂದು ಪರಿಗಣಿಸಲಾಯಿತು. ಆದರೆ ರೋಗವು ಮುಂದುವರೆದಂತೆ, ರೋಗಲಕ್ಷಣಗಳು ಬದಲಾಗತೊಡಗಿದವು ಮತ್ತು ಉಸಿರಾಟದ ತೊಂದರೆ, ವಾಸನೆ ಮತ್ತು ರುಚಿಯ ನಷ್ಟ, ಅತಿಸಾರ, ತಲೆ ಮತ್ತು ಮೈ-ಕೈ ನೋವು, ತೀವ್ರ ಆಯಾಸ ಮತ್ತು ದೌರ್ಬಲ್ಯವನ್ನು ಕೂಡಾ ಈ ಲಕ್ಷಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಈ ವರ್ಷ ಕೊರೊನಾದಿಂದ ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಂಡರು ಮತ್ತು ಇದು ಅತ್ಯಂತ ಗಂಭೀರ ಸಾಂಕ್ರಾಮಿಕ ರೋಗವೆಂದು ಪರಿಗಣಿಸಲಾಗುತ್ತಿದೆ. ಈ ರೋಗವು ಜೀವನ ವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿತು ಮತ್ತು ಮಾನಸಿಕವಾಗಿ ಹಾಗೂ ದೈಹಿಕವಾಗಿ ಪರಿಣಾಮ ಬೀರಿತು. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ, ಮಾಸ್ಕ್ ಧರಿಸುವುದು ಮತ್ತು ನಿರಂತರ ನೈರ್ಮಲ್ಯೀಕರಣ ಎಲ್ಲರಿಗೂ ಮುಖ್ಯವಾಯಿತು.
ಕೊಮೊರ್ಬಿಡ್ ಕಾಯಿಲೆ ಇರುವ ಜನರ ಮೇಲೆ ಕೋವಿಡ್-19 ಪರಿಣಾಮ:
ಈ ಸೋಂಕು ಈಗಾಗಲೇ ಹೃದಯ ಸಮಸ್ಯೆ, ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ ಜನರ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಇಂತಹ ಆರೋಗ್ಯ ಪರಿಸ್ಥಿತಿಗಳಿಂದ ಬಳಲುತ್ತಿರುವ ಜನರು ಈಗಾಗಲೇ ಸೋಂಕಿಗೆ ತುತ್ತಾಗಿದ್ದಾರೆ.
2020ರಲ್ಲಿ ಹೃದಯ ಸಮಸ್ಯೆಗೆ ಸಂಬಂಧಿಸಿದ ಪ್ರಕರಣಗಳು ಮೊದಲಿಗಿಂತಲೂ ಹೆಚ್ಚಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ವರ್ಷ ಹೃದಯಾಘಾತದಿಂದ ಜಾಗತಿಕವಾಗಿ ಸಂಭವಿಸಿದ ಸಾವುಗಳು ಕಳೆದ 20 ವರ್ಷಗಳಿಂದ ಅತಿ ಹೆಚ್ಚಾಗಿದೆ. ಅಂಕಿ- ಅಂಶಗಳ ಪ್ರಕಾರ, ಹೃದ್ರೋಗವು ಶೇ 16ರರಷ್ಟು ಸಾವುಗಳಿಗೆ ಕಾರಣವಾಗಿದೆ.
ಶ್ವಾಸಕೋಶ ಮತ್ತು ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ:
ಕೊರೊನಾವನ್ನು ಉಸಿರಾಟದ ವ್ಯವಸ್ಥೆ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯೆಂದು ಪರಿಗಣಿಸಲಾಗಿದೆ. ಏಕೆಂದರೆ ಇದರ ಲಕ್ಷಣಗಳು ಜ್ವರ ಮತ್ತು ನ್ಯುಮೋನಿಯಾದಂತಿದ್ದವು ಮತ್ತು ಒಬ್ಬ ವ್ಯಕ್ತಿ ಈ ಸೋಂಕಿಗೆ ತುತ್ತಾದ ಬಳಿಕ ಶ್ವಾಸಕೋಶದ ಮೇಲೆ ಇದು ಹೆಚ್ಚಾಗಿ ಪರಿಣಾಮ ಬೀರುತ್ತದೆ.
ಸೋಂಕಿತರು ಉಸಿರಾಟದ ತೊಂದರೆ ಕುರಿತು ಹೆಚ್ಚು ದೂರು ನೀಡುತ್ತಿದ್ದು, ರೋಗಿಗಳಲ್ಲಿ ಗಂಭೀರ ಶ್ವಾಸಕೋಶದ ಕಾಯಿಲೆಗಳು ಕೂಡಾ ವರದಿಯಾಗಿವೆ. ಪರಿಣಾಮವಾಗಿ ಜನರ ಶ್ವಾಸಕೋಶವು ಸರಿಯಾಗಿ ತನ್ನ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಿತು ಮತ್ತು ಸೋಂಕಿತರಿಗೆ ಹೆಚ್ಚುವರಿ ಆಮ್ಲಜನಕವನ್ನು ನೀಡಲಾಯಿತು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರವೂ ಜನರ ಉಸಿರಾಟದ ವ್ಯವಸ್ಥೆಯ ಮೇಲೆ ಗಂಭೀರ ದೀರ್ಘಕಾಲೀನ ಪರಿಣಾಮಗಳಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.