ಯಾದಗಿರಿ: ಪರ ಪುರುಷನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆವೋರ್ವಳು ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಮಸಣ ಸೇರಿಸಿದ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸತತ 11 ತಿಂಗಳ ತನಿಖೆಯ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಯಾದಗಿರಿ ನಗರದ ನಿವಾಸಿಯಾಗಿದ್ದ ಜಗನ್ನಾಥ ಎಂಬುವರು ಹನ್ನೊಂದು ತಿಂಗಳ ಹಿಂದೆ ಬರ್ಬರವಾಗಿ ಹತ್ಯೆಗೀಡಾಗಿದ್ದರು.14 ವರ್ಷಗಳ ಹಿಂದೆ ಸುರಪುರ ನಗರದ ಅಶ್ವಿನಿ ಎಂಬಾಕೆಯ ಜೊತೆ ವಿವಾಹವಾಗಿದ್ದು, ಇಬ್ಬರು ಗಂಡು ಮಕ್ಕಳು ಕೂಡ ಇದ್ದರು. ಈತ ಸ್ವಂತ ಫೋಟೋ ಸ್ಟುಡಿಯೋ ಇಟ್ಟುಕೊಂಡು ಮದುವೆ ಸಮಾರಂಭಗಳ ಫೋಟೋ ತೆಗೆದು ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ವಲ್ಪ ದಿನಗಳ ನಂತರ ತನ್ನ ವ್ಯವಹಾರದಲ್ಲಿ ಜಗನ್ನಾಥ ನಷ್ಟ ಅನುಭವಿಸಿದ್ದ ಬಳಿಕ ಅವನ ಪತ್ನಿ ಅಶ್ವಿನಿಯು ಬಡವಾಣೆಯಲ್ಲಿರುವ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಎರಡು ಮಕ್ಕಳ ತಾಯಿ ಆದ ಆಕೆ ಶಶಿಕುಮಾರ್ ಎಂಬಾತನ ಜೊತೆ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದಳು. ಈ ವಿಷಯ ತಿಳಿದ ಜಗನ್ನಾಥ ಪತ್ನಿಯೊಂದಿಗೆ ನಿತ್ಯ ಜಗಳ ಮಾಡುತ್ತಿದ್ದ. ಇದರಿಂದ ಬೇಸತ ಅಶ್ವಿನಿ, ತನ್ನ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆ ಮಾಡಿ ಶವವನ್ನು ಗುರಮಿಠಕಲ್ನ ದರ್ಮಾಪೂರ ಘಾಟ್ ಬಳಿ ಸಾಕ್ಷಿ ನಾಶಮಾಡಲು ಬಿಸಾಡಿದ್ದರು. 2019ರ ಫೆಬ್ರವರಿ 24ರಂದು ಜಗನ್ನಾಥ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆಗುರಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಪೊಲೀಸರು ಸಾಕ್ಷಿ ಸಮೇತ ಶಶಿಕುಮಾರ್ ಮತ್ತು ಅಶ್ವಿನಿಯನ್ನು ಬಂಧಿಸಿದ್ದಾರೆ.