ಯಾದಗಿರಿ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾ ಕ್ರೀಡಾಂಗಣದಿಂದ ಪ್ರತಿಭಟನೆ ಪ್ರಾರಂಭಿಸಿದ ಸಾವಿರಾರು ಶಿಕ್ಷಕ ಹಾಗೂ ಶಿಕ್ಷಕಿಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗುವ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಯವರಿಗೂ ಮೆರವಣಿಗೆ ನಡೆಸಿದರು.
ಸಾವಿರಾರು ಮಕ್ಕಳಿಗೆ ನಾವು ಪಾಠ ಮಾಡುತ್ತೇವೆ ಹೊರತು ಯಂತ್ರಗಳಿಗಲ್ಲ. ನಾವು ಚೆನ್ನಾಗಿದ್ರೆ ಮಾತ್ರ ಮಕ್ಕಳಿಗೆ ಪಾಠ ಕಲಿಸುತ್ತೇವೆ. ನಾವೇ ಮಾನಸಿಕವಾಗಿ ಕುಗ್ಗಿ ಹೋದ್ರೆ ನಾವು ಹೇಗೆ ಪಾಠ ಮಾಡಬೇಕೆಂದು ಪ್ರಾಥಮಿಕ ಶಾಲಾ ಶಿಕ್ಷಕರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಿಕ್ಷಕರ ಪ್ರತಿಭಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಶಾಲಾ ಶಿಕ್ಷಕರು ನಾವು ಗಂಡ, ಮಕ್ಕಳನ್ನು ದೂರ ಮಾಡಿಕೊಂಡು ಮಕ್ಕಳಿಗೆ ಜಿಲ್ಲೆಯಲ್ಲಿ ವಿದ್ಯೆಯನ್ನ ನೀಡುತ್ತಿದ್ದೇವೆ. ನಾವು ಮಾನಸಿಕವಾಗಿ ಕುಗ್ಗಿ ಹೋಗಿದ್ದೇವೆ. ಗಂಡ ಹೆಂಡತಿಯರ ನಡುವೆ ಪ್ರೀತಿ ಕಮರಿ ಹೋಗಿದೆ. ಮಕ್ಕಳ ಪಾಲನೆ-ಪೋಷಣೆ ಮಾಡುವುದು ಕಷ್ಟವಾಗಿದೆ. ಆದರೂ ಸರಕಾರ ನಮ್ಮನ್ನು ನಿರ್ಲಕ್ಷಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ವರ್ಗಾವಣೆ ತಡೆ ಹಿಡಿಯಲಾಗಿದ್ದು, ನಾವೆಲ್ಲಾ ಮುಂಬೈ ಕರ್ನಾಟಕ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದಿಂದ ಬಂದಿದ್ದೇವೆ. ನಾವು ಹತ್ತರಿಂದ ಹದಿನೈದು ವರ್ಷಗಳ ಕಾಲ ಯಾದಗಿರಿ ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇವೆ . ದಯಮಾಡಿ ನಮ್ಮನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಸರಕಾರಕ್ಕೆ ಮನವಿ ಮಾಡಿದರು.