ಯಾದಗಿರಿ:ಸಾಮಾನ್ಯವಾಗಿ ನಾವು ವಿವಿಧ ಕಾರುಗಳ ಎಕ್ಸಪೋ, ದ್ವಿಚಕ್ರ ವಾಹನಗಳ ಎಕ್ಸಪೋ ಹೀಗೆ ಹಲವು ಎಕ್ಸಪೋಗಳನ್ನು ನೋಡಿದ್ದೇವೆ. ಆದರೆ ಮಕ್ಕಳು ತಾವೇ ವ್ಯಾಪಾರ ವಹಿವಾಟು ಮಾಡುವ ಎಜುಕೇಶನ್ ಎಕ್ಸಪೋ ಎಲ್ಲಿಯಾದರೂ ನೋಡಿದ್ದೀರಾ? ಇಲ್ಲ ತಾನೆ.. ಹಾಗಾದ್ರೆ ಬನ್ನಿ ಇಲ್ಲಿ ಸ್ಟಡಿ ಎಕ್ಸಪೋ ಹೇಗಿತ್ತು ಎಂಬುದರ ಸಂಪೂರ್ಣ ವರದಿ ಇಲ್ಲಿದೆ. ಯಾದಗಿರಿ ಜಿಲ್ಲೆಯ ಶಾಂತಿ ಸದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಮಕ್ಕಳಿಗಾಗಿ ಸ್ಟಡಿ ಎಕ್ಸಪೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಹಣ್ಣುಗಳ ಮಾದರಿ ವೇಷ ಧರಿಸಿದ್ದ ಮಕ್ಕಳು.. ವಿವಿಧ ಬಗೆಯ ಹಣ್ಣುಗಳ ವೇಷ ಧರಿಸಿದ್ದ ಮಕ್ಕಳು ಶಾಸಕ ನಾಗನಗೌಡ ಕಂದಕೂರು ಎದುರಿಗೆ ಹಣ್ಣುಗಳ ಮಹತ್ವವನ್ನು ತಿಳಿಸಿದರು. ಶಾಲಾ ಶಿಕ್ಷಕರು ಎಲ್ಕೆಜಿ, ಯುಕೆಜಿ ಚಿಕ್ಕ ಚಿಕ್ಕ ಮಕ್ಕಳಿಗೆ ವಿವಿಧ ಹಣ್ಣುಗಳ ವೇಷಭೂಣದಲ್ಲಿ ಆಗಮಿಸಿ ಹಣ್ಣುಗಳ ಮಹತ್ವ ತಿಳಿಸುವಂತೆ ಮಾರ್ಗದರ್ಶನ ನೀಡಿದ್ದರು. ಮಕ್ಕಳ ಸಹ ಒಂದು ತಿಂಗಳಿಂದ ಎಕ್ಸಪೋಗೆ ಸಿದ್ಧತೆ ಮಾಡಿಕೊಂಡು ಯಾವುದೇ ಭಯ, ಆತಂಕವಿಲ್ಲದೇ ತಾವು ಧರಿಸಿದ ಹಣ್ಣುಗಳ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಳು ಹುರಿದಂತೆ ಪಟಪಟನೇ ಮಾಹಿತಿಯನ್ನು ವಿವರಿಸಿದರು.
ಮಕ್ಕಳ ಬಾಯಿಯಿಂದ ಆಂಗ್ಲಭಾಷೆ ಕೇಳಿದವರಿಗೆ ಖುಷಿ.. ಚಿಕ್ಕ ಕಂದಮ್ಮಗಳ ಬಾಯಲ್ಲಿ ಬರುತ್ತಿದ್ದ ಇಂಗ್ಲಿಷ್ ಭಾಷೆ ಕೇಳಿ ಶಾಸಕರೇ ಕೆಲ ಕಾಲ ದಂಗಾದರು. ಎಲ್ಲ ಮಕ್ಕಳ ಬಳಿ ಹೋಗಿ ಮಕ್ಕಳ ಮಾತುಗಳನ್ನು ಆಲಿಸಿದರು. ಪುಟಾಣಿಗಳ ವಿವಿಧ ಬಗೆಯ ವೇಷಭೂಷಣ ನೋಡುಗರ ಕಣ್ಮನ ಸೆಳೆಯುವಂತಿತ್ತು. ಎಲ್ಕೆಜಿ ಹಾಗೂ ಯುಕೆಜಿ ಮಕ್ಕಳು ಮಾತ್ರವಲ್ಲದೇ ಪ್ರಾಥಮಿಕ ಶಾಲಾ ಮಕ್ಕಳು ತಾವು ತಯಾರಿಸಿದ್ದ ವಸ್ತುಗಳನ್ನು ಪ್ರದರ್ಶಿಸಿದರು. ಕನ್ನಡ, ಇಂಗ್ಲಿಷ್, ಗಣಿತ ಸೇರಿ ಹಲವು ವಿಷಯಗಳ ಬಗ್ಗೆ ಪ್ರದರ್ಶನ ನೀಡಿದರು.