ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಸಂಭ್ರಮದಿಂದ ಜರುಗಿತು. ಗ್ರಾಮದ ಅರ್ಚಕ ಬಸಪ್ಪ ಸಿಂಪಿ ಅವರ ಮನೆಯಲ್ಲಿದ್ದ ಯಲ್ಲಮ್ಮ ದೇವಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಬಾಜಾ-ಬಜಂತ್ರಿ ಗಾನವಾದ್ಯಗಳಸಹಿತ ಊರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಭಾಗದ ಪ್ರಮುಖ ನದಿಯಾದ ಕೃಷ್ಣಾ ನದಿಯಲ್ಲಿ ಗಂಗಾಸ್ಥಾನ ನೆರವೇರಿತು. ಈ ಬಳಿಕ ಉತ್ಸವ ಮೂರ್ತಿಯ ಮೆರವಣಿಗೆ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ಆಗಮಿಸಿತು.
ಜಾತ್ರೆಗೆ ತಾಲೂಕಿನ ವಿವಿಧ ಗ್ರಾಮದ ಜನರು ಸೇರಿದಂತೆ ಮಹಾರಾಷ್ಟ್ರದಿಂದಲೂ ಹೆಚ್ಚಿನ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಹರಕೆ ತೀರಿಸುವ ಅರೆಬೆತ್ತಲೆ ಮೆರವಣಿಗೆ ನಿಷೇಧಿಸಿದ್ದರಿಂದ ಮೈತುಂಬ ಸೊಪ್ಪು ಸುತ್ತಿಕೊಂಡು ತಲೆಯ ಮೇಲೆ ಆರತಿ ಹೊತ್ತು ಭಕ್ತರು ಹರಕೆ ಪೂರೈಸಿದರು. ಜಾತ್ರೆಯಲ್ಲಿ ಮಕ್ಕಳ ಆಟಿಕೆ ಸಾಮಗ್ರಿಗಳ ಮಳಿಗೆ, ಕಬ್ಬಿನ ಜ್ಯೂಸ್ ಅಂಗಡಿ, ತಿಂಡಿ-ತಿನಿಸುಗಳ ಮಳಿಗೆ, ಹಣ್ಣಿನ ಮಳಿಗೆ, ಮಹಿಳೆಯರಿಗೆ ಸಂಬಂಧಿಸಿದ ಮಳಿಗೆ, ಪಳಾರು ಅಂಗಡಿ ಹಾಗೂ ಜೋಕಾಲಿಗಳಲ್ಲಿ ಜನಂಸಂದಣಿ ಕಂಡುಬಂತು. ಸಗರ ಗ್ರಾಮದಲ್ಲಿ ಯಲ್ಲಮ್ಮ ದೇವಿ ಜಾತ್ರೆಯ ಪ್ರಯುಕ್ತ ವಿವಿಧ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕುಸ್ತಿ ಪಂದ್ಯವನ್ನೂ ಆಯೋಜಿಸಿದ್ದು ವೀಕ್ಷಣೆಗೆ ಸುತ್ತಮುತ್ತಲಿನ ಹಳ್ಳಿಗಳು ಹಾಗೂ ವಿವಿಧ ಜಿಲ್ಲೆಗಳಿಂದ ಜನರು ಬಂದಿದ್ದರು.
ಬಹಳಷ್ಟು ಜನರು ಕುಟುಂಬಸಮೇತ ಟಂಟಂ, ಜೀಪ್, ಕಾರ್, ಬೈಕ್‌ಗಳ ಮೂಲಕ ಜಾತ್ರೆಗೆ ಆಗಮಿಸಿದ್ದರು. ಭಕ್ತರು ಮನೆಯಲ್ಲೇ ಭರ್ಜರಿ ಭೋಜನ ತಯಾರಿಸಿಕೊಂಡು ಜಾತ್ರೆ ಬಂದಿದ್ದರು. ಎಲ್ಲರೂ ಸೇರಿಕೊಂಡು ಹೋಳಿಗೆ, ಕಡುಬು, ಖಡಕ್ ರೊಟ್ಟಿ, ಬದನೆಕಾಯಿ, ಪುಂಡಿಪಲ್ಯ ಹೀಗೆ ನಾನಾ ರೀತಿಯ ಆಹಾರ ಸವಿಯುತ್ತಿದ್ದ ದೃಶ್ಯ ಕಂಡುಬಂತು.