ಸುರಪುರ (ಯಾದಗಿರಿ): ನಗರದ ಹೊಸ ಬಾವಿ ಬಳಿಯಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ನಗರದ ರಸ್ತೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಖಾಲಿ ನಿವೇಶನದಲ್ಲಿ ಕಂಪೌಂಡ್ ನಿರ್ಮಿಸುವ ನೆಪದಲ್ಲಿ ರಸ್ತೆಯ ಮೇಲೆ ಕಂಪೌಂಡ್ ನಿರ್ಮಿಸುತ್ತಿದ್ದು, ಇದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ಸದಸ್ಯರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಖಾಸಗಿ ವ್ಯಕ್ತಿಯೊಬ್ಬರು ಅಂಬೇಡ್ಕರ್ ನಗರದಲ್ಲಿ ಎರಡು ಫ್ಲ್ಯಾಟ್ಗಳನ್ನು ಪಡೆದುಕೊಂಡಿದ್ದು, ಅಂಬೇಡ್ಕರ್ ನಗರದ ಮೇಲೆ ಹೋಗುವ ರಸ್ತೆಯ ಮೇಲೆ ಕಂಪೌಂಡ್ ಕಟ್ಟುತ್ತಿದ್ದಾರೆ ಎಂದರು.
ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ಪ್ರಶ್ನಿಸಿದವರಿಗೆ ಸುರಪುರ ಅರಸು ಮನೆತನದವರ ಹೆಸರು ಹೇಳಿ ಬೆದರಿಸುತ್ತಿದ್ದಾರೆ. ಇವರಿಂದ ಅಂಬೇಡ್ಕರ್ ನಗರದ ಜನತೆಗೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ಅಕ್ರಮವಾಗಿ ನಿರ್ಮಿಸುತ್ತಿರುವ ಕಂಪೌಂಡ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಜೊತೆಗೆ, ನಗರಸಭೆಯಲ್ಲಿ ಸುಮಾರು ಐದು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಎಂದು ಮನವಿ ಸಲ್ಲಿಸುತ್ತಿದ್ದೇವೆ. ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ, ಮುಂದೆ ಕುಂಬಾರಪೇಟೆ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಸ್ತೆತ ಡೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ನಿಂಗಣ್ಣ ಬಿರಾದರ್ ಮೂಲಕ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಟ್ಟೆಪ್ಪ ನಾಗರಾಳ, ಬುದ್ಧಿವಂತ ನಾಗರಾಳ, ತಿಪ್ಪಣ್ಣ ಶೆಳ್ಳಗಿ, ಖಾಜಾ ಹುಸೇನ್ ಗುಡಗುಂಟಿ, ಮರಿಲಿಂಗಪ್ಪ ಹುಣಸಿಹೊಳೆ ಸೇರಿದಂತೆ ಅನೇಕರಿದ್ದರು.