ಯಾದಗಿರಿ:ಡಿಡಿಪಿಐ ಕಚೇರಿಯಲ್ಲಿ ಹಣ ಕೊಟ್ಟವರಿಗೆ ಬಡ್ತಿ ನೀಡಿ, ಅರ್ಹತೆ ಇದ್ದವರನ್ನು ಪರಿಗಣಿಸಿಲ್ಲ ಎಂದು ಡಿಡಿಪಿಐ ಕಚೇರಿ ಎದುರು ಶಿಕ್ಷಕರು ಜಮಾಯಿಸಿ ಅಸಮಾಧಾನ ಹೊರ ಹಾಕಿದ್ದಾರೆ.
ಐದು ವರ್ಷಗಳ ಬಳಿಕ ಶಿಕ್ಷಕರ ಹುದ್ದೆಗಳಲ್ಲಿ ಬಡ್ತಿ ನೀಡುವುದಕ್ಕೆ ಅವಕಾಶ ಸಿಕ್ಕಿದೆ. ಹೀಗಾಗಿ ಮೊನ್ನೆ ಜಿಲ್ಲೆಯ ಶಿಕ್ಷಕರ ಬಡ್ತಿ ಪ್ರಕ್ರಿಯೆ ಆರಂಭವಾಗಿತ್ತು. ಆದ್ರೆ ಬಡ್ತಿ ಪ್ರಕ್ರಿಯೆ ಆರಂಭವಾಗುತ್ತಿದಂತೆ ಶಿಕ್ಷಕರಲ್ಲಿ ಅಸಮಾಧಾನ ಉಂಟಾಗಿದೆ. ಬಡ್ತಿ ವಿಚಾರದಲ್ಲಿ ಡಿಡಿಪಿಐ ಕಚೇರಿ ಅಧಿಕಾರಿಗಳು ಗೋಲ್ಮಾಲ್ ಮಾಡಿದ್ದಾರೆ ಎಂದು ಶಿಕ್ಷಕರು ಆರೋಪಿಸಿದ್ದಾರೆ.
ರಾತ್ರೋರಾತ್ರಿ ತಮಗೆ ಬೇಕಾದವರಿಗೆ ಹಾಗೂ ಹಣ ಕೊಟ್ಟವರಿಗೆ ಬಡ್ತಿ ಲಿಸ್ಟ್ನಲ್ಲಿ ಹೆಸರು ಸೇರಿಸಲಾಗಿದೆ. ಆದ್ರೆ ಅರ್ಹತೆ ಇದ್ದವರನ್ನು ಪರಿಗಣಿಸಿಲ್ಲವೆಂದು ಶಿಕ್ಷಕರು ಆರೋಪಿಸುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢ ಶಾಲೆಯ ಶಿಕ್ಷಕರಾಗಿ ಬಡ್ತಿ ನೀಡಲಾಗುತ್ತಿದೆ. ಆದ್ರೆ ಶಿಕ್ಷಕರ ಗಮನಕ್ಕೆ ತರದೆ ಲಿಸ್ಟ್ ಫೈನಲ್ ಮಾಡಿ, ಮೊನ್ನೆ ಬೆಳಿಗ್ಗೆ ಡಿಡಿಪಿಐ ಕಚೇರಿಯಲ್ಲಿ ನೋಟಿಸ್ ಬೋರ್ಡ್ಗೆ ಬಡ್ತಿ ಪಡೆದವರ ಹೆಸರನ್ನು ಹಚ್ಚಲಾಗಿದೆ. ಈ ವಿಚಾರವಾಗಿ ಶಿಕ್ಷಕರಿಗೆ ಅಸಮಾಧಾನ ಉಂಟಾಗಿ ಡಿಡಿಪಿಐ ಕಚೇರಿ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ 15ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದವರಿಗೆ, ಜೊತೆಗೆ ನೇಮಕಾತಿ ವೇಳೆ ಪಡೆದ ರ್ಯಾಂಕ್ ಪರಿಗಣಿಸಿ ಬಡ್ತಿ ನೀಡಲಾಗುತ್ತದೆ. ಶಿಕ್ಷಕರು ಪಡೆದಿರುವ ವಿಷಯಗಳ ಮೇಲೆ ಪ್ರೌಢ ಶಾಲೆಯಲ್ಲಿ ಆಯಾ ವಿಷಯಗಳ ಶಿಕ್ಷಕರ ಹುದ್ದೆ ಖಾಲಿ ಇರುವುದನ್ನು ಪರಿಶೀಲನೆ ಮಾಡಿ ಬಡ್ತಿ ನೀಡಲಾಗುತ್ತದೆ. ಆದ್ರೆ ಜಿಲ್ಲೆಯಲ್ಲಿ ಮಾತ್ರ ಈ ರೀತಿ ಪಾರದರ್ಶಕವಾಗಿ ಬಡ್ತಿ ಪ್ರಕ್ರಿಯೆ ನಡೆಯುತ್ತಿಲ್ಲ ಎಂಬುದು ಶಿಕ್ಷಕರ ಆರೋಪವಾಗಿದೆ.
ವಿಷಯ ಗಂಭೀರವಾಗುತ್ತಿದಂತೆ ಡಿಡಿಪಿಐ ಕಚೇರಿಯಿಂದ ಹೊರ ಬಂದು ನಾಳೆ ಬಡ್ತಿ ಪ್ರಕ್ರಿಯೆ ಆರಂಭಿಸಲಾಗುತ್ತೆ ಎಂದು ಹೇಳಿ ಕೊಂಚ ಮಟ್ಟಿಗೆ ಶಿಕ್ಷಕರಿಗೆ ಸಮಾಧಾನ ಪಡಿಸಿದ್ದಾರೆ. ಶಿಕ್ಷಕರ ಆರೋಪ ಸುಳ್ಳು, ಕಚೇರಿಯಲ್ಲಿ ಹಣ ಪಡೆದು ಬಡ್ತಿಯನ್ನು ನೀಡುತ್ತಿರುವುದನ್ನು ಸಾಬೀತು ಪಡಿಸಿದ್ರೆ ಕೆಲಸಕ್ಕೆ ರಾಜೀನಾಮೆ ನೀಡಿ ಹೋಗುತ್ತೇನೆ ಎಂದು ಡಿಡಿಪಿಐ ತಿಳಿಸಿದ್ದಾರೆ.