ಗುರುಮಠಕಲ್: ಬಿಜೆಪಿ ಎಂಎಲ್ಸಿ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ ಘರ್ ವಾಪಸಿ ಆಗಿರುವುದರಿಂದ ಕ್ಷೇತ್ರದಲ್ಲಿ ಜೆಡಿಎಸ್ಗೆ ಯಾವುದೇ ರೀತಿಯ ಪರಿಣಾಮ ಉಂಟಾಗುವುದಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಶಾಸಕ ನಾಗನಗೌಡ ಕಂದಕೂರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅಭಿವೃದ್ಧಿ ಕೆಲಸಗಳು ಹಾಗೂ ಶರಣು ಗೌಡ ಕಂದಕೂರ ಅವರ ಕ್ಷೇತ್ರದ ಮೇಲೆ ಇರುವ ಕಾಳಜಿಯಿಂದ ಜನರು ಮತ್ತು ಯುವಕರು ಜೆಡಿಎಸ್ ಪರವಾಗಿದ್ದರೆ ಎಂಬುದಕ್ಕೆ ಯರಗೋಳ ಗ್ರಾಮದಲ್ಲಿ ಜರುಗಿದ ಐತಿಹಾಸಿಕ ಪಂಚರತ್ನ ಯಾತ್ರೆ ಆಯೋಜನೆ ನಿದರ್ಶನವಾಗಿದೆ ಎಂದರು.
ಬಾಬುರಾವ್ ಚಿಂಚನಸೂರ್ ತೊಡೆ ತಟ್ಟಿ ಖರ್ಗೆ ಅವರನ್ನು ಸೋಲಿಸುತ್ತೇನೆ ಎಂದಿದ್ದರು. ಈಗ ಅವರಿಗೆ ಹಾಸಿಗೆ ಹಾಕಿರುವುದು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊರತೆ ಇದೆ ಎಂಬುದು ಕಾಣುತ್ತಿದೆ. ನಮ್ಮ ಶರಣು ಗೌಡ ಕಂದಕೂರ ಈ ಬಾರಿ ಹೆಚ್ಚಿನ ಅಂತರದಲ್ಲಿ ಗೆಲುವು ದಾಖಲೆ ಮಾಡುತ್ತಾರೆ ಎಂಬ ಆತ್ಮವಿಶ್ವಾಸವಿದೆ. ಬಾಬುರಾವ್ ತಮ್ಮ ಕೋಲಿ ಜಾತಿಯನ್ನು ಎಸ್ಟಿಗೆ ಸೇರಿಸುತ್ತೇನೆ ಎಂದು ಬಿಜೆಪಿಗೆ ಸೇರ್ಪಡೆ ಆಗಿ ಎಲ್ಲ ಅಧಿಕಾರ ಅನುಭವಿಸಿದರು. ಆದರೆ ಅವರು ಏನು ಮಾಡಿದರು. ಮುಂದೆ ಅವರ ಸಮಾಜಕ್ಕೆ ಏನು ಉತ್ತರಿಸುತ್ತಾರೆ. ಅವರಿಗೆ ಯಾವ ರೀತಿ ತಕ್ಕ ಪಾಠ ಕಲಿಸುತ್ತಾರೆ ಎಂಬುದು ಕ್ಷೇತ್ರದ ಜನರು ಚುನಾವಣೆಯಲ್ಲಿ ತೋರಿಸುತ್ತಾರೆ ಎಂದು ಹೆಚ್ಡಿಕೆ ತಿಳಿಸಿದರು.
ಬಿಜೆಪಿ ಮತ್ತು ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಕಾಂಗ್ರೆಸ್ ಚುನಾವಣೆ ಮುಂಚೆ ಆಪರೇಷನ್ ಹಸ್ತ ಮಾಡುತ್ತಿದೆ. ಚುನಾವಣೆ ಫಲಿತಾಂಶ ಬಂದ ನಂತರ ಬಿಜೆಪಿ ಕಮಲ ಆಪರೇಷನ್ ಮಾಡುತ್ತದೆ ಎಂದು ರಾಷ್ಟ್ರೀಯ ಪಕ್ಷಗಳ ಕುರಿತು ವ್ಯಂಗ್ಯವಾಗಿ ಮಾತನಾಡಿದರು. ಸರ್ಕಾರ ಜಾಹೀರಾತುಗಳಲ್ಲಿ ರಾಜ್ಯದ ಅಭಿವೃದ್ಧಿ ಕುರಿತು ಬಿಂಬಿಸುತ್ತಿದೆ. ಜಾಹೀರಾತುಗಳಿಗೆ ನೀಡುವ ಆದ್ಯತೆ ಜನತೆ ಮೇಲೆ ಮತ್ತು ರಾಜ್ಯದ ಅಭಿವೃದ್ಧಿ ಪರ ತೋರಿಸಬೇಕಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.