ಯಾದಗಿರಿ:ರಾಜ್ಯದಲ್ಲಿ ಈಗ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಎಸ್ವೈ ಬೆಂಬಲಿಗ ಶಾಸಕರು ಸಿಎಂ ಆಗಿ ಬಿಎಸ್ವೈ ಅವರು ತಮ್ಮ ಪೂರ್ಣ ಅವಧಿ ಪೂರೈಸುತ್ತಾರೆಂದು ಹೇಳಿಕೆ ನೀಡುತ್ತಿದ್ದಾರೆ, ಮತ್ತೊಂದೆಡೆ ತೆರೆಮೆರೆಯಲ್ಲಿ ಸಿಎಂ ಸ್ಥಾನದಿಂದ ಇಳಿಸಲು ಲೆಕ್ಕಾಚಾರ ನಡೆಯುತ್ತಿದೆ. ಈ ನಡುವೆ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು ಇನ್ನೊಂದು 6 ತಿಂಗಳಲ್ಲಿ ಸಿಎಂ ಸ್ಥಾನದಿಂದ ಬಿಎಸ್ವೈರನ್ನು ಕೆಳಗಿಳಿಸೋದು ಖಚಿತ ಎಂದಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಹಪುರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು, ರಾಜ್ಯದಲ್ಲಿ ಸರ್ಕಾರ ನಡೆಯುತ್ತಿಲ್ಲ ಮುಖ್ಯಮಂತ್ರಿಗಳಿಗೆ ವಯಸ್ಸಾಗಿದೆ. ಸಚಿವರ ಎಲ್ಲಾ ಇಲಾಖೆ ಕೆಲಸದಲ್ಲಿ , ಹಣಕಾಸಿನ ವ್ಯವಹಾರದಲ್ಲಿ ಕೂಡ ಸಿಎಂ ಅವರ ಮಗ ವಿಜಯೇಂದ್ರ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ, ಇದರಿಂದ ಬಹುತೇಕ ಸಚಿವರು ಅಸಮಾಧಾನಗೊಂಡಿದ್ದಾರೆ. ಸಿಎಂ ಬದಲು ಅವರ ಮಗ ಆಡಳಿತದಲ್ಲಿ ಹೆಚ್ಚಿನ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದರಿಂದ ಅಸಮಾಧಾನಗೊಂಡ ಸಚಿವರು ಈಗಾಗಲೇ ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ಮುಂದೆ ಸಿಎಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಅವರನ್ನು ಬದಲಾವಣೆ ಮಾಡಿದರೆ ಮಾತ್ರ ಪಕ್ಷಕ್ಕೆ ಒಳ್ಳೆದಾಗುತ್ತದೆ ಎಂದು ಸಲಹೆ ನೀಡಿದ್ದು ಈ ಕುರಿತು ಕೇಂದ್ರ ಸರಕಾರ ಈ ಬಗ್ಗೆ ಮಾಹಿತಿ ಪಡೆದಿದೆ, ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.