ಯಾದಗಿರಿ:ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಕೆ.ಗೋಪಾಲಯ್ಯ ತಾಲೂಕಿನ ಯರಗೋಳ ಗ್ರಾಮದ ನ್ಯಾಯಬೆಲೆ ಅಂಗಡಿಗಳಿಗೆ ಗುರುವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ಯಾದಗಿರಿ: ನ್ಯಾಯಬೆಲೆ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಸಚಿವ ಗೋಪಾಲಯ್ಯ ಯರಗೋಳದ ಎರಡು ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲಾದ ಕಡಲೆ ಮತ್ತು ತೊಗರಿ ಬೇಳೆ ಕಳಪೆಮಟ್ಟದ್ದಾಗಿದ್ದು, ಇವುಗಳನ್ನು ಪಡಿತರದಾರರಿಗೆ ವಿತರಣೆ ಮಾಡಬಾರದೆಂದು ಸೂಚಿಸಿದರು.
ಕಡಲೆ ಮತ್ತು ತೊಗರಿ ಬೇಳೆಯನ್ನು ಬದಲಾಯಿಸಿ ವಿತರಿಸಲು ನಫೇಡ್ ಏಜೆನ್ಸಿಗೆ ಸೂಚಿಸಲು ಸ್ಥಳದಲ್ಲಿದ್ದ ಆಹಾರ ಇಲಾಖೆ ಉಪ ನಿರ್ದೇಶಕ ದತ್ತಪ್ಪ ಕಲ್ಲೂರಗೆ ನಿರ್ದೇಶನ ನೀಡಿದರು. ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯ ಸರಬರಾಜು ಆಗುವ ಮುನ್ನ ಪರಿಶೀಲಿಸಬೇಕು ಎಂದರು.
ಅಲ್ಲದೆ ಗುಣಮಟ್ಟ ಪರಿಶೀಲನಾ ಅಧಿಕಾರಿಗಳಿಂದ ಪಡಿತರ ವರದಿ ಪಡೆದ ನಂತರವೇ ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯ ಸರಬರಾಜಾಗುತ್ತದೆ. ಆದ್ಯಾಗ್ಯೂ ಕಳಪೆ ಮಟ್ಟದ ಪಡಿತರ ಆಹಾರ ಧಾನ್ಯ ಸರಬರಾಜಾಗಿರುವುದನ್ನು ನೋಡಿದರೆ ಇದರಲ್ಲಿ ಅಧಿಕಾರಿಗಳ ಲೋಪದೋಷ ಕಂಡು ಬರುತ್ತಿದೆ. ಕಳಪೆ ಪಡಿತರ ಸರಬರಾಜಾದರೆ ಪರಿಶೀಲನೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ಪಡಿತರ ಚೀಟಿದಾರರೊಂದಿಗೆ ಮಾತನಾಡಿದ ಸಚಿವರು, ಉಚಿತವಾಗಿ ಪಡಿತರ ಆಹಾರ ಧಾನ್ಯ ವಿತರಿಸುತ್ತಿರುವುದರ ಬಗ್ಗೆ ಮಾಹಿತಿ ಪಡೆದುಕೊಂಡರು.