ಕರ್ನಾಟಕ

karnataka

ETV Bharat / state

ಬಾಳು ಬೆಳಗಿದ ಟೆಂಟ್: 3ನೇ ಕ್ಲಾಸ್‌ಗೆ ಶಾಲೆ ಬಿಟ್ಟಿದ್ದ ಬಾಲಕಿ ನೇರವಾಗಿ ಎಸ್ಸೆಸ್ಸೆಲ್ಸಿ ಪಾಸ್ - ಟೆಂಟ್ ಶಾಲೆ

ಯಾದಗಿರಿಯ ಗುರುಮಠಕಲ್ ಪಟ್ಟಣದ ಜೋಪಡಿಯಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದ ಬಾಲಕಿಯೊಬ್ಬಳು ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸ್ ಮಾಡಿ ಗಮನ ಸೆಳೆದಿದ್ದಾಳೆ.

Girl Passed SSLC Directly
ಬಾಲಕಿ ನೇರವಾಗಿ ಎಸ್ಸೆಸ್ಸೆಲ್ಸಿ ಪಾಸ್

By

Published : Aug 12, 2021, 10:14 AM IST

Updated : Aug 12, 2021, 7:41 PM IST

ಯಾದಗಿರಿ:ಮೂರನೇ ಕ್ಲಾಸ್​​ಗೆ ಶಾಲೆಗೆ ಗುಡ್​ ಬೈ ಹೇಳಿಜೀವನ ನಿರ್ವಹಣೆಗಾಗಿ ಊರೂರು ತಿರುಗಾಡಲು ಪ್ರಾರಂಭಿಸಿದ ಅಲೆಮಾರಿ ಜನಾಂಗದ ಮಗಳೊಬ್ಬಳು ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತೇರ್ಗಡೆ ಹೊಂದುವ ಮೂಲಕ ಗಮನಸೆಳೆದಿದ್ದಾಳೆ.

ಜಿಲ್ಲೆಯ ಗುರುಮಠಕಲ್ ಪಟ್ಟಣದ ಜೋಪಡಿಯಲ್ಲಿ ಬದುಕಿನ ಬಂಡಿ ದೂಡುತ್ತಿರುವ ಭಾಸ್ಕರ್ ಹಾಗೂ ಜಯಮ್ಮ ದಂಪತಿಗಳ ಇಬ್ಬರು ಮಕ್ಕಳಲ್ಲಿ ಹಿರಿಯ ಮಗಳು ಮೋನಿಕಾ ಈ ಸಾಧನೆ ಮಾಡಿದ್ದಾಳೆ.

ಕಟ್ಟಲಗೇರಾ ಸರ್ಕಾರಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಾಗ ಬಡತನದ ಕಾರಣದಿಂದ ಮೋನಿಕಾ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಳು. ಬಳಿಕ ಜೀವನೋಪಾಯಕ್ಕಾಗಿ ತಂದೆ-ತಾಯಿಯೊಂದಿಗೆ ಊರೂರು ಅಲೆದಾಡುತ್ತಿದ್ದಳು. ಹೀಗಿರುವಾಗ ಮಗುವಿನ ಅದೃಷ್ಟಕ್ಕೆ ಮತ್ತೊಮ್ಮೆ ಅಕ್ಷರ ಕಲಿಯುವ ಭಾಗ್ಯ ಸಿಕ್ಕಿದ್ದು ಶಿಕ್ಷಕ ಶಾಂತಪ್ಪ ಯಾಳಗಿ ಅವರ ಮುಖಾಂತರ.

ಯಲಸತ್ತಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶಾಂತಪ್ಪ ಯಾಳಗಿ ಅವರು, ಸ್ವಹಿತಾಸಕ್ತಿವಹಿಸಿ ಗುರುಮಠಕಲ್‌ನ ಅಲೆಮಾರಿ ಬುಡ್ಗ ಜಂಗಮ ಮಕ್ಕಳಿಗಾಗಿ ಮತ್ತೋರ್ವ ಶಿಕ್ಷಕ ರಮೇಶ ಜಾದವ್ ಅವರೊಂದಿಗೆ ಸೇರಿ ಕಳೆದ ವರ್ಷ ಸಾಯಂಕಾಲದ ಟೆಂಟ್ ಶಾಲೆ ಆರಂಭಿಸಿದ್ದಾರೆ. ಈ ಟೆಂಟ್ ಶಾಲೆ ಸೇರಿದ ಮೋನಿಕಾ ಇತರ ಮಕ್ಕಳಿಗಿಂತಲೂ ಕಲಿಕೆಯಲ್ಲಿ ಅತ್ಯಂತ ಉತ್ಸಾಹ ಹಾಗೂ ಆಸಕ್ತಿ ತೋರುತ್ತಿದ್ದಳು. ಈ ಮೂಲಕ ಸಹಜವಾಗಿ ಶಿಕ್ಷಕರ ಗಮನ ಸೆಳೆದಿದ್ದಳು.

3ನೇ ಕ್ಲಾಸ್‌ಗೆ ಶಾಲೆ ಬಿಟ್ಟಿದ್ದ ಬಾಲಕಿ ನೇರವಾಗಿ ಎಸ್ಸೆಸ್ಸೆಲ್ಸಿ ಪಾಸ್

ಮಗುವಿನ ಬಗ್ಗೆ ಪೂರ್ವ ಮಾಹಿತಿ ಕಲೆ ಹಾಕಿದ ಶಿಕ್ಷಕರು, ವಯೋಮಿತಿಯ ಆಧಾರದ ಮೇಲೆ ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಸಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಮೋನಿಕಾ, ಕನ್ನಡ (54), ಇಂಗ್ಲಿಷ್ (50), ಹಿಂದಿ(45), ಗಣಿತ (35), ವಿಜ್ಞಾನ (43) ಹಾಗೂ ಸಮಾಜ ವಿಜ್ಞಾನದಲ್ಲಿ (73) ಅಂಕ ಸೇರಿ ಒಟ್ಟು 625 ಕ್ಕೆ 300 ಅಂಕ ಪಡೆದು ಪಾಸ್ ಆಗಿದ್ದಾಳೆ. ಈ ಮೂಲಕ ಬುಡ್ಗ ಜಂಗಮ ಸಮುದಾಯದ ಜನ ಹೆಮ್ಮೆ ಪಡುವಂತೆ ಮಾಡಿದ್ದಾಳೆ.

ಮೋನಿಕಾಳ ಕಾಲೇಜು ಶಿಕ್ಷಣಕ್ಕೆ ಬೇಕಿದೆ ಸಹಾಯಸ್ತ:ಬಡತನದ ಕಾರಣದಿಂದ ಮೂರನೇ ತರಗತಿಗೆ ಶಾಲೆ ಬಿಟ್ಟ ಮೋನಿಕಾ ಶಿಕ್ಷಕರೊಬ್ಬರ ಕಾಳಜಿಯಿಂದ ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಪಾಸ್ ಆಗಿದ್ದಾಳೆ. ಇದೀಗ ಈಕೆಯ ಕಾಲೇಜು ಶಿಕ್ಷಣಕ್ಕೆ ಸಹಾಯದ ಅಗತ್ಯವಿದೆ. ಬಡತನದ ನಡುವೆ ಶಿಕ್ಷಣ ಪಡೆದು ಉಜ್ವಲ ಬದುಕು ಕಟ್ಟಿಕೊಳ್ಳಲು ಹೊರಟಿರುವ ಮೋನಿಕಾಳ ಸಹಾಯಕ್ಕೆ ದಾನಿಗಳು ಬರಬೇಕಿದೆ.

ತಮ್ಮ ಪರಿಶ್ರಮದಿಂದ ಮೋನಿಕಾ ಎಸ್ಸೆಸ್ಸೆಲ್ಸಿ ಪಾಸ್​ ಆಗಿರುವ ಬಗ್ಗೆ ಶಿಕ್ಷಕ ಶಾಂತಪ್ಪ ಯಾಳಗಿ ಸಂತಸ ವ್ಯಕ್ತಪಡಿಸಿದ್ದಾರೆ. ಗುರುಮಠಕಲ್‌ನ ಅಲೆಮಾರಿ ಬುಡ್ಗ ಜಂಗಮ ಜನಾಂಗದ ಮಕ್ಕಳಿಗೆ ಅಕ್ಷರ ಕಲಿಸಲು ಸಾಯಂಕಾಲದ ಟೆಂಟ್ ಶಾಲೆ ಕಳೆದ ವರ್ಷ ಆರಂಭಿಸಿದ್ದೇವೆ. ಈ ವೇಳೆ ಮೋನಿಕಾಳ ಕಲಿಕಾ ಆಸಕ್ತಿ ನಮ್ಮ ಗಮನ ಸೆಳೆದಿತ್ತು. ಪ್ರತಿದಿನ ಸಾಯಂಕಾಲದ ಸಮಯದಲ್ಲಿ ಅವಳಿಗೆ ಬೋಧನೆ ಮಾಡಿದ್ದೇವೆ. ವಯಸ್ಸಿನ ಆಧಾರದ ಮೇಲೆ ನೇರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಅವಳು ಉತ್ತೀರ್ಣಳಾಗಿದ್ದು, ಶ್ರಮಕ್ಕೆ ಫಲ ಸಿಕ್ಕಂತಾಗಿದೆ ಎಂದಿದ್ದಾರೆ.

ಮನೆಯಲ್ಲಿ ಅಪ್ಪನ ಅನಾರೋಗ್ಯದ ನಿಮಿತ್ತ ಅಮ್ಮನಿಂದ ಕುಟುಂಬ ನಿರ್ವಹಣೆ ಕಷ್ಟವಾದ ಕಾರಣ ಶಾಲೆ ಬಿಟ್ಟು ಭಿಕ್ಷಾಟನೆ ಮಾಡುತ್ತಿದ್ದೆ. ಯಾಳಗಿ ಸರ್ ಮತ್ತು ಜಾದವ ಸರ್ ಅವರುಗಳ ಮಾರ್ಗದರ್ಶನ ಹಾಗೂ ಬೋಧನೆಯಿಂದ ಎಸ್ಸೆಸ್ಸೆಲ್ಸಿ ಪಾಸ್ ಮಾಡಿದ್ದೇನೆ. ಅವರಿಬ್ಬರನ್ನು ನಮ್ಮ ಕುಟುಂಬ ಎಂದೂ ಮರೆಯಲ್ಲ ಎಂದು ಬಾಲಕಿ ಮೋನಿಕಾ ಹೇಳಿದ್ದಾಳೆ.

Last Updated : Aug 12, 2021, 7:41 PM IST

ABOUT THE AUTHOR

...view details