ಸುರಪುರ/ಯಾದಗಿರಿ:ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಕೇವಲ ಮಂದಿರವಲ್ಲ. ನಮ್ಮ ಭಾರತದ ಸಂಸ್ಕೃತಿಯ ಸಂಕೇತ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು. ಪಟ್ಟಣದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀರಾಮ ಮಂದಿರವನ್ನು ಯಾರೋ ಒಬ್ಬ ವ್ಯಕ್ತಿ ಆಗಲಿ ಅಥವಾ ಸರ್ಕಾರವಾಗಲಿ ನಿರ್ಮಿಸುವುದು ಮುಖ್ಯವಲ್ಲ. ಭಾರತೀಯರಾದ ಪ್ರತಿಯೊಬ್ಬರೂ ಪ್ರೀತಿಯನ್ನು ಸಮರ್ಪಿಸಬೇಕು ಎನ್ನುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಮರ್ಪಣ ಅಭಿಯಾನ ಈ ಅಭಿಯಾನದ ಮೂಲಕ ಸುರಪುರ ಮತ್ತು ಹುಣಸಗಿ ತಾಲೂಕಿನ ಪ್ರತಿಯೊಬ್ಬರು ಕೂಡ ತಮ್ಮಿಂದ ಸಾಧ್ಯವಾದ ಮಟ್ಟಿಗೆ ಸಹಕಾರವನ್ನು ನೀಡಬೇಕು. ಇದು ಯಾವುದೇ ಒಂದು ಜಾತಿ, ಧರ್ಮ ಅಥವಾ ಪಕ್ಷಕ್ಕೆ ಸೀಮಿತವಾದದ್ದಲ್ಲ. ಪ್ರತಿಯೊಬ್ಬರಿಗೂ ಕೂಡ ಶ್ರೀರಾಮನ ಬಗ್ಗೆ ಭಕ್ತಿ ಇರಲಿದೆ. ಆದ್ದರಿಂದ ಎಲ್ಲರೂ ಕೂಡ ಈ ಅಭಿಯಾನಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು.
ವಿದೇಶದಿಂದ ಬರುವ ಪ್ರತಿಯೊಬ್ಬರು ಕೂಡ ಭಾರತಕ್ಕೆ ಆಗಮಿಸಿದ ಮೊಟ್ಟಮೊದಲಿಗೆ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನೋಡಿಕೊಂಡು ನಂತರದಲ್ಲಿ ದೇಶವನ್ನು ನೋಡಬೇಕು. ಈ ನಿಟ್ಟಿನಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸಲಾಗುತ್ತದೆ ಎಂದು ವಿವರಣೆ ನೀಡಿದರು.
ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಅಭಿಯಾನವು, ನಗರದ ಪ್ರಮುಖ ಬೀದಿಗಳ ಮೂಲಕ ಪಾಂಡುರಂಗ ದೇವಸ್ಥಾನದವರೆಗೆ ನಡೆಯಿತು.