ಹತ್ತು ಕೇಜಿ ಉಚಿತ ಅಕ್ಕಿ ನೀಡುತ್ತೇವೆ ಇದು ನಮ್ಮ ಭಾಷೆ ಯಾದಗಿರಿ:ತಾಂಡಾದಲ್ಲಿ ವಾಸಿಸುವವರಿಗೆ ದಾಖಲಾತಿಗಳು ಇರಲಿಲ್ಲ. ನಾವು 2013 ರಲ್ಲಿ ಅಧಿಕಾರಕ್ಕೆ ಬಂದಾಗ ಕಂದಾಯ ಗ್ರಾಮ ಮಾಡಬೇಕು ಎಂದು ತೀರ್ಮಾನಿಸಿದ್ದೆವು ಹಾಗೂ ನಾರಾಯಣಪುರ ಸ್ಕಾಡಾ ಗೇಟ್ಗಳು ನಾವು ಪ್ರಾರಂಭಿಸಿದ್ದು ,ಆದರೆ ಉದ್ಘಾಟನೆ ಬಿಜೆಪಿಯವರು ಮಾಡಿದ್ದಾರೆ. ಅಡುಗೆ ಮಾಡಿದವರು ನಾವು ಊಟಕ್ಕೆ ಮೋದಿಗೆ ಕರೆದುಕೊಂಡು ಬಂದರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳುವ ಮೂಲಕ ಮೋದಿ ವಿರುದ್ಧ ಗರಂ ಆದರು. ಕ್ರೆಡಿಟ್ ಪಾಲಿಟಿಕ್ಸ್ ವಿರುದ್ಧ ಹರಿಹಾಯ್ದರು.
ನಗರದ ವನಿಕೇರಿ ಲೇಔಟ್ನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ನಿಮಿತ್ತ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನರಸಿಂಹಯ್ಯ ನೇತೃತ್ವದಲ್ಲಿ ನಾವು ತಾಂತ್ರಿಕ ಸಮಿತಿ ನೇಮಕ ಮಾಡಲಾಗಿತ್ತು. ಆಗ ಕಂದಾಯ ಗ್ರಾಮ ಮಾಡಲು ಏನೇನು ಕ್ರಮ ತೆಗೆದುಕೊಂಡಿದ್ದೇವೆ. ಕಾಗೋಡು ತಿಪ್ಪಮ್ಮ ಕಂದಾಯ ಸಚಿವರಾಗಿದ್ದರು. ವಾಸಿಸುವವನೆ ಮನೆಯ ಒಡೆಯ ಎಂದು ನಾವು ಹೊಸ ಸೆಕ್ಷನ್ ಸೇರಿಸುವ ಕೆಲಸ ಮಾಡಿದ್ದೀವಿ ಎಂದು ಹೇಳಿದರು.
ಈಗಿನ ಸಚಿವರು ಅಲಿಬಾಬಾ ಶೇ40ರಷ್ಟು ಚೋರ್ ಇದ್ದ ಹಾಗೆ. ಇವರ ಮುಖಕ್ಕೆ ಓಟ ಬರಲ್ಲ ಅಂತ ಮೋದಿಗೆ ಕರೆದುಕೊಂಡು ಬರುತ್ತಿದ್ದಾರೆ. ಏಕೆಂದರೆ ಇವರ ಮುಖ ಅಳಸಿ ಹೋಗಿದೆ. ಇವರಿಗೆ ಜನ ಬಡಿಗೆ ತೆಗೆದುಕೊಂಡು ಹೊಡೆಯುತ್ತಾರೆ ಎಂದು ಆರೋಪಿಸಿದರು.
ಆಶಾ ಕಾರ್ಯಕರ್ತೆಯರನ್ನು ಕರೆದುಕೊಂಡು ಕಾರ್ಯಕ್ರಮ ಮಾಡುತ್ತಾರೆ. ಇವರ ಕಾರ್ಯಕ್ರಮಕ್ಕೆ ಜನ ಬರ್ತಾ ಇಲ್ಲ. ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ನಾನು ಸಿಎಂ ಇದ್ದಾಗ ಗ್ರಾಪಂಗಳಿಗೆ 200-300 ಮನೆಗಳನ್ನ ಕೊಟ್ಟಿದ್ದೇನೆ. ಈ ಬಾರಿ 4 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಬೇಕು. ಈ ಬಾರಿ ಕಾಂಗ್ರೆಸ್ ಎಂದು ಘೋಷಣೆ ಕೂಗಿದರು.
ಕೆಪಿಸಿಸಿ ಅಧ್ಯಕ್ಷರ ವಾಗ್ಧಾನ:ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ರೈತರ, ಕೂಲಿ ಕಾರ್ಮಿಕರ, ಬಡವರ ದೀನ ದಲಿತರ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಯೋಜನೆಗಳನ್ನು ಜಾರಿಗೆ ತಂದಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ವಾರ್ಷಿಕ 5,000 ಕೋಟಿ ರು. ಗಳು ಅನುದಾನ ನೀಡುವುದರ ಜೊತೆಗೆ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬಲಾಗುವುದು. ಅಂತಹ ಯಾವುದಾದರೂ ಕೊಡುಗೆ ನಿಮ್ಮದು ಇದೆಯಾ ಎಂದು ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು.
ಬಡ ತಾಯಂದಿರ ಕಷ್ಟ ನಿವಾರಣೆಗೆ ಪ್ರತಿ ತಿಂಗಳು ರೂ 2,000 ಕೊಡುವ ಹಾಗೂ ಪ್ರತಿಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ವಾಗ್ಧಾನಕ್ಕೆ ಪ್ರಿಯಾಂಕಾ ಗಾಂಧಿ ಘೋಷಣೆ ಮಾಡಿದ್ದಾರೆ. ನಾನು ಹಾಗೂ ಸಿದ್ದರಾಮಯ್ಯ ಜನರಿಗೆ ಭರವಸೆ ನೀಡುತ್ತಿದ್ದೇವೆ. ನಮ್ಮ ಸರ್ಕಾರ ಬಂದಾಗ ಪ್ರತಿ ಕುಟುಂಬಕ್ಕೆ ಹತ್ತು ಕೇಜಿ ಉಚಿತ ಅಕ್ಕಿ ನೀಡುತ್ತೇವೆ ಇದು ನಮ್ಮ ಭಾಷೆ ಎಂದರು. ಯಾರೇ ಅಭ್ಯರ್ಥಿ ಆಗಲಿ ಅವರನ್ನು ಗೆಲ್ಲಿಸಿ ಯಾರು ಅಭ್ಯರ್ಥಿ ಆಗಲಿಲ್ಲವೋ ಅವರನ್ನು ನಿಗಮ ಮಂಡಳಿಯಲ್ಲಿ ಅವಕಾಶ ನೀಡುತ್ತೇವೆ. ಭಾಗದ ಎಲ್ಲ 41 ಕ್ಷೇತ್ರಗಳಲ್ಲಿ ಗೆಲ್ಲಿಸಬೇಕು. ಈ ಮೂಲಕ ಖರ್ಗೆ ಅವರಿಗೆ ಗೌರವಸಲ್ಲಿಸಬೇಕು ಎಂದು ಮನವಿ ಮಾಡಿದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ, ಪ್ರಿಯಾಂಕ್ ಖರ್ಗೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಬಸರೆಡ್ಡಿ ಅನಪೂರ ಮಾತನಾಡಿದರು. ಡೇವಿಡ್ ಸಿಮೆಯೋನ್, ಮಾಜಿ ಸಚಿವರಾದ ಶರಣಪ್ರಕಾಶ ಪಾಟೀಲ, ಮಾಜಿ ಶಾಸಕರಾದ ವೆಂಕಟಪ್ಪ ನಾಯಕ, ಶರಣಪ್ಪ ಮಟ್ಟೂರು, ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಅಲ್ಲಮಪ್ರಭು ಪಾಟೀಲ, ಜಗದೇವ ಗುತ್ತೇದಾರ, ವಸಂತಕುಮಾರ, ಮರಿಗೌಡ ಹುಲಕಲ್, ಭೀಮಣ್ಣ ಮೇಟಿ , ಡಾ ಶರಣಬಸವಪ್ಪ ಕಾಮರೆಡ್ಡಿ, ಸತೀಶ ಕಂದಕೂರ ಇತರರಿದ್ದರು.
ಇದನ್ನೂ ಓದಿ:ಸರ್ಕಾರ ಬೆನ್ನಿಗಿಲ್ಲದೇ ಕಿಂಗ್ ಪಿನ್ ಆಗಲ್ಲ: ಡಿಕೆ ಶಿವಕುಮಾರ್