ಯಾದಗಿರಿ :ಜಿಲ್ಲೆಯ ಶಹಾಪುರ ತಾಲೂಕಿನ ಮರಕಲ್ ಗ್ರಾಮದ ಅಂಗನವಾಡಿ ಕೇಂದ್ರದ ಛಾವಣಿಯ ಸಿಮೆಂಟ್ ಪದರ ಕುಸಿದು 2 ವರ್ಷದ ಮಗುವಿನ ತಲೆಗೆ ಗಾಯವಾಗಿದೆ. ಇಂದ್ರಧನುಷ್ ಲಸಿಕೆ ಹಾಕಿಸುತ್ತಿದ್ದಾಗ ಅವಘಡ ಸಂಭವಿಸಿತು. ಅಂಗನವಾಡಿಯಲ್ಲಿದ್ದ ಇತರ 6 ಮಕ್ಕಳು ಹಾಗೂ ಪೋಷಕರು ಪಾರಾಗಿದ್ದಾರೆ.
ಗಾಯಗೊಂಡ ಮಗುವನ್ನು ಕೂಡಲೇ ದೇವದುರ್ಗ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೆದಾರ ಮಾಹಿತಿ ನೀಡಿದರು.
ಆರು ತಿಂಗಳ ಹಿಂದಷ್ಟೇ ಅಂಗನವಾಡಿ ನಿರ್ಮಿಸಲಾಗಿದೆ. ಕಳಪೆ ಕಾಮಗಾರಿಯಿಂದ ಛಾವಣಿಯ ಪದರ ಕುಸಿದಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಗ್ರಾಮದ ಮುಖಂಡರು ಆಗ್ರಹಿಸಿದರು. ವಿಷಯ ತಿಳಿದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡಿಸಿದರು.
ಇತ್ತೀಚೆಗೆ ನಡೆದ ಘಟನೆಗಳು: ನೀರಿನ ಟ್ಯಾಂಕ್ ಕುಸಿದು ಬಿದ್ದು ಮೂವರು ಸಾವು : ನಾಲ್ಕು ಅಂತಸ್ತಿನ ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್ ಕುಸಿದು ಕೆಳಗಡೆ ಇದ್ದ ಫಾಸ್ಟ್ ಫುಡ್ ಅಂಗಡಿ ಮೇಲೆ ಬಿದ್ದು ಗ್ರಾಹಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ರಾಜಧಾನಿಯ ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚಿಗೆ ನಡೆದಿತ್ತು. ಆ.2 ರ ಬುಧವಾರ ರಾತ್ರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಆ.3 ರಂದು ಆಸ್ಪತ್ರೆಯಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಅರುಳ್, ನಾಗೇಶ್ವರ ರಾವ್ ಮತ್ತು ಕಮಲ್ ಥಪಾ ಮೃತ ದುರ್ದೈವಿಗಳು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಿವಾಜಿನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಶತಮಾನ ಕಂಡ ಸರ್ಕಾರಿ ಶಾಲೆಯ ಛಾವಣಿ ಕುಸಿತ : ಕೆಲ ದಿನಗಳ ಹಿಂದೆ ಭಾರಿ ಮಳೆಗೆ ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಗುಡೂಎ ಎಸ್.ಸಿ ಗ್ರಾಮದಲ್ಲಿರುವ ಶತಮಾನ ಕಂಡಿರುವ ಸರ್ಕಾರಿ ಶಾಲೆಯ ಛಾವಣಿ ಕುಸಿದು ಬಿದ್ದಿತ್ತು. ಸರ್ಕಾರಿ ಶಾಲೆಯು 150 ವರ್ಷದ ಹಳೆಯದಾಗಿದ್ದರಿಂದ ಶಾಲೆಯ ಕಟ್ಟಡ ಶಿಥಿಲಗೊಂಡಿತ್ತು. ಭಾರಿ ಮಳೆಗೆ ಶಾಲೆಯ ಒಟ್ಟು ಐದು ಕೊಠಡಿಗಳು ಹೆಂಚಿನ ಮೇಲ್ಛಾವಣಿ ಪೈಕಿ ಮೂರು ಕೊಠಡಿಗಳ ಮೇಲ್ಛಾವಣಿ ಹಾನಿಯಾಗಿತ್ತು. ಇನ್ನು ಎರಡು ಕೊಠಡಿಗಳು ಬೀಳುವ ಹಂತಕ್ಕೆ ತಲುಪಿವೆ. ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಶಾಲಾ ಗೋಡೆ ಕುಸಿಯುವ ಭೀತಿ, ಆತಂಕದಲ್ಲಿ ವಿದ್ಯಾರ್ಥಿಗಳು: ದಾವಣಗೆರೆಜಿಲ್ಲೆಯಲ್ಲಿ ಸುರಿದ ಮಳೆಗೆ ವಿವಿಧೆಡೆ ಶಾಲಾ ಕಟ್ಟಡಗಳು ಕುಸಿಯುವ ಹಂತ ತಲುಪಿದ್ದು, ಜಿಲ್ಲೆಯ ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದ ಕ್ಯಾಂಪ್ನಲ್ಲಿರುವ ಸರ್ಕಾರಿ ಉರ್ದು ಶಾಲೆ ದುಃಸ್ಥಿತಿಗೆ ತಲುಪಿದೆ. ಶಾಲೆಯ ಕಟ್ಟಡ ಗೋಡೆಗಳು ಆಗೋ ಈಗೋ ಬೀಳುವ ಸ್ಥಿತಿ ಎದುರಾಗಿದೆ. ಇದೇ ಭಯದಲ್ಲಿ ವಿದ್ಯಾರ್ಥಿಗಳು ಅಂಗೈಯಲ್ಲಿ ತಮ್ಮ ಜೀವ ಹಿಡಿದು ಪಾಠ ಕೇಳುವ ಪರಿಸ್ಥಿತಿ ಇಲ್ಲಿದೆ.
ಇದನ್ನೂ ಓದಿ :ತಿರುವಿನಲ್ಲಿ ಸೋಲಾರ್ ಪ್ಲೇಟ್ ತುಂಬಿದ್ಧ ಲಾರಿ ಪಲ್ಟಿ: ಚಾಲಕ, ಕ್ಲೀನರ್ ಜಸ್ಟ್ ಮಿಸ್