ಯಾದಗಿರಿ: ಸರ್ಕಾರದ ಆದೇಶದ ಮೇರೆಗೆ ರಾಜ್ಯಾದ್ಯಂತ 1 ರಿಂದ 5ನೇ ತರಗತಿಗಳು ಸೋಮವಾರ ಆರಂಭವಾಗಿದ್ದು, ಸುಮಾರು ತಿಂಗಳುಗಳ ಬಳಿಕ ಖುಷಿಯಿಂದ ಶಾಲೆಗೆ ಬಂದ ವಿದ್ಯಾರ್ಥಿಗಳು ಶಾಲಾವರಣದಲ್ಲಿ ಬಿದ್ದಿದ್ದ ಮದ್ಯದ ಬಾಟಲ್‌ಗಳನ್ನು ಕಂಡು ದಂಗಾಗಿದ್ದಾರೆ.
ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಮದ್ಯದ ಬಾಟಲ್‌ಗಳ ದರ್ಶನ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಕನ್ಯಾ ಶಾಲೆ ಕುಡುಕರ ತಾಣವಾಗಿ ಪರಿವರ್ತಿತವಾಗಿದೆ. ಶಾಲಾವರಣದಲ್ಲಿ ಎಲ್ಲಿ ನೋಡಿದರೂ ಮದ್ಯದ ಬಾಟಲ್‌ಗಳು ಬಿದ್ದಿರುವ ದೃಶ್ಯ ಕಂಡು ವಿದ್ಯಾರ್ಥಿಗಳು, ಶಿಕ್ಷಕರು ಕಂಗಾಲಾಗಿದ್ದಾರೆ. ಕುಡುಕರ ಮೋಜು, ಮಸ್ತಿಗೆ ಸುತ್ತಲಿನ ಪರಿಸರ ಹಾಳಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕಿದೆ.
ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ವಿಜೃಂಭಣೆಯಿಂದ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಬರಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಸಿದ್ಧತೆ ಮಾಡಿಕೊಂಡಿದ್ದೆವು. ಈಗ ಮತ್ತೆ ಆವರಣ ಸ್ವಚ್ಛ ಮಾಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ಸ್ಥಿತಿ ಉದ್ಭವವಾಗಿದೆ ಎಂದು ಮುಖ್ಯಗುರು ಶ್ರೀನಿವಾಸ ಅಸಮಾಧಾನ ತೋಡಿಕೊಂಡರು. ಸ್ನೇಹಿತರೊಡನೆ ಬೆರೆತು ಸಿಹಿ ಹಂಚಿ ಶಾಲಾ ಪ್ರವೇಶ ಮಾಡಬೇಕೆಂದುಕೊಂಡಿದ್ದ ವಿದ್ಯಾರ್ಥಿಗಳು, ಮೊದಲ ದಿನವೇ ಮದ್ಯದ ಬಾಟಲ್‌ಗಳು ಕಂಡು ಮಕ್ಕಳು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ರಮಕ್ಕೆ ಒತ್ತಾಯ: ಸ್ವಚ್ಛತೆಯಿಂದ ಕೂಡಿರಬೇಕಾದ ಶಾಲೆಗಳು ಕುಡುಕರ ತಾಣಗಳಾಗಿ ಮಾರ್ಪಾಡುವಾಗುತ್ತಿವೆ. ಇಲ್ಲಿ ಯಾರು ಹೇಳೋರು ಕೇಳೋರು ಇಲ್ಲದಂತಾಗಿದೆ. ಹೀಗಾಗಿ ಕಿಡಿಗೇಡಿಗಳ ಪುಂಡಾಟಿಕೆ ಮೆರೆಯುತ್ತಿದ್ದಾರೆ. ಕೂಡಲೆ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸಿದ್ದಾರೆ.