ವಿಜಯಪುರ:ಪ್ರತೀ ವರ್ಷ ಜಿಲ್ಲೆಯಲ್ಲಿ ಅತಿ ವೃಷ್ಡಿ, ಅನಾವೃಷ್ಟಿ ಜನರನ್ನು ಕಾಡುತ್ತಲೇ ಇರುತ್ತದೆ. ಈ ವರ್ಷ ಉತ್ತಮ ಮಳೆಯಾಗಿದ್ದು, ರೈತ ಸಂತಸಗೊಂಡಿದ್ದ. ಆದರೆ ಈ ಮಧ್ಯೆ ವಾಣಿಜ್ಯ ಬೆಳೆ ಈರುಳ್ಳಿಗೆ ಕೀಟಭಾದೆ ತಗುಲಿದ್ದು, ಬೆಳೆ ಸಂಪೂರ್ಣ ನೆಲಕಚ್ಚಿದೆ. ಈರುಳ್ಳಿ ಬೆಳೆ ನಂಬಿದ್ದ ಅನ್ನದಾತ ಮತ್ತೆ ಕಂಗಾಲಾಗಿದ್ದಾನೆ.
ಹಳದಿ ರೋಗದಿಂದ ನೆಲ ಕಚ್ಚಿದ ಈರುಳ್ಳಿ.. ಈ ವರ್ಷ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದೆ. ಸಹಜವಾಗಿ ವಾಣಿಜ್ಯ ಬೆಳೆ ಬೆಳೆದ ರೈತನಲ್ಲಿ ಮಂದಹಾಸ ಮೂಡಿದೆ. ಆದರೆ ಇದರ ನಡುವೆ ಈರುಳ್ಳಿ ಬೆಳೆಗೆ ಮಂಜು ಆವರಿಸಿದ ಕಾರಣ ಬೆಳೆ ನೆಲಕಚ್ಚಿದೆ. ಉತ್ತಮ ಗಡ್ಡೆ ಬರಬೇಕಾಗಿದ್ದ ಈರುಳ್ಳಿ ಗಾತ್ರ ಕಡಿಮೆಯಾಗಿದ್ದು, ತಪ್ಪಲು ಸೊರಗಿ ಹೋಗಿದೆ. ಜಿಲ್ಲೆಯಲ್ಲಿ ಲಕ್ಷಾಂತರ ಹೆಕ್ಟೇರ್ನಲ್ಲಿ ಈರುಳ್ಳಿ ಬೆಳೆಯಲಾಗಿದೆ. ಉತ್ತಮ ಫಸಲು ಬರುವ ವೇಳೆ ಮಂಜಿನಿಂದ ಈರುಳ್ಳಿಗೆ ಕೊಳೆ ರೋಗ, ಹಳದಿ ರೋಗ ತಗುಲಿದೆ.
ಹಳದಿ ರೋಗದಿಂದ ನೆಲ ಕಚ್ಚಿದ ಈರುಳ್ಳಿ.. ಈರುಳ್ಳಿ ಹೆಚ್ಚು ಬೆಳೆ ಬೆಳೆಯುವ ಜಿಲ್ಲೆಯಲ್ಲಿ ವಿಜಯಪುರ ಎರಡನೇ ಸ್ಥಾನದಲ್ಲಿದೆ. ಚಿತ್ತದುರ್ಗ ಮೊದಲ ಸ್ಥಾನದಲ್ಲಿದೆ. ಪ್ರತಿ ವರ್ಷ ಜಿಲ್ಲೆಯಲ್ಲಿ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ದ್ರಾಕ್ಷಿ, ನಿಂಬೆ ಬಿಟ್ಟರೆ ಈರುಳ್ಳಿ ವಿಜಯಪುರದಲ್ಲಿ ಉತ್ತಮ ತೋಟಗಾರಿಕೆ ಬೆಳೆಯಾಗಿ ಗುರುತಿಸಿಕೊಂಡಿದೆ.
ಆದರೆ ಈ ವರ್ಷ 3.50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಸತತ ಮಳೆಯಿಂದ ಬೆಳೆಗೆ ಮಂಜು ಕವಿದ ಕಾರಣ ಈರುಳ್ಳಿ ಫಸಲು ಕೈಗೆ ಬರುವ ಮುನ್ನವೇ ಹಾಳಾಗಿ ಹೋಗುತ್ತಿದೆ. ತೋಟಗಾರಿಕೆ ಅಧಿಕಾರಿಗಳನ್ನು ಕೇಳಲಾಗಿ, ಔಷಧಿ ಸಿಂಪಡಿಸಿ ಸರಿ ಹೋಗುತ್ತದೆ ಎನ್ನುವ ಸಿದ್ಧ ಉತ್ತರ ಸಿಗುತ್ತಿದೆಯೇ ಹೊರತು ಹಳದಿ ರೋಗ ಹಾಗೂ ಕಳೆ ರೋಗ ತಡೆಯಲು ಯಾವುದೇ ಕ್ರಮ ಮಾತ್ರ ಕೈಗೊಳ್ಳುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಈ ವರ್ಷ ವಾಣಿಜ್ಯ ಬೆಳೆ ಬಹುತೇಕ ಕೈಕೊಟ್ಟಿದೆ. ದ್ರಾಕ್ಷಿಗೆ ಹಳದಿ ರೋಗ ಬಂದು ನಾಶವಾಗಿದ್ದರೆ. ನಿಂಬೆ ಹಣ್ಣು ಭಾರಿ ಮಳೆ, ಗಾಳಿಗೆ ಉದುರಿ ಹೋಗಿವೆ. ಇದರ ನಡುವೆ ಕೊರೊನಾದಿಂದ ಬೆಳೆಗಳನ್ನು ಖರೀದಿಸುವರು ಯಾರೂ ಇಲ್ಲವಾಗಿದೆ. ಇಂತಹ ಸಂಕಷ್ಟದ ನಡುವೆ ಈರುಳ್ಳಿ ಸಹ ನೆಲಕಚ್ಚಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.