ವಿಜಯಪುರ:ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಡೋಣಿ ನದಿ ತುಂಬಿ ಹರಿಯುತ್ತಿದೆ.
ನಿನ್ನೆ ರಾತ್ರಿ ಎಡೆಬಿಡದೆ ಸುರಿದ ಮಳೆಗೆ ಡೋಣಿ ಸುತ್ತಮುತ್ತಲಿನ ಸುಮಾರು 300 ಹೆಕ್ಟೇರ್ ಪ್ರದೇಶದಲ್ಲಿನ ತೊಗರಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಬಬಲೇಶ್ವರದಲ್ಲಿ ಕಳೆದ ರಾತ್ರಿ 16.8 ಮಿ.ಮೀಟರ್ ಮಳೆಯಾಗಿದೆ. ವಿಜಯಪುರ ನಗರದಲ್ಲಿ15.2, ಮಮದಾಪುರದಲ್ಲಿ 15.4, ಕನ್ನೂರದಲ್ಲಿ 10.3 ಮಿ.ಮೀಟರ್ ಮಳೆಯಾದ ಕಾರಣ ಡೋಣಿಗೆ ನದಿಗೆ ಹೊಂದಿಕೊಂಡಿರುವ ಸಾರವಾಡದಲ್ಲಿ ಹಳೆಯ ಮನೆಗಳು ಕುಸಿದಿವೆ.
ಇದೇ ಭಾಗದಲ್ಲಿ ಅತಿ ಹೆಚ್ಚು 200 ಹೆಕ್ಟೇರ್ ಕೃಷಿ ಭೂಮಿ ಸಂಪೂರ್ಣ ಕೊಚ್ಚಿ ಹೋಗಿದೆ. ಕಳೆದ 15 ದಿನಗಳ ಹಿಂದೆಯಷ್ಟೇ ಮಳೆ ಸುರಿದಾಗ ಕೈಗೆ ಬಂದಿದ್ದ ತೊಗರಿ ಬೆಳೆ ಸ್ವಲ್ಪ ಪ್ರಮಾಣದಲ್ಲಿ ಹಾಳಾಗಿತ್ತು. ಉಳಿದ ತೊಗರಿ ಇಳುವರಿಯಾದರೂ ಸಿಗುತ್ತೆ ಎಂದು ಅಂದಾಜಿಸಲಾಗಿತ್ತು. ಆದರೆ ರಾತ್ರಿ ಸುರಿದ ಮಳೆಯಿಂದ ಅಳಿದುಳಿದ ತೊಗರಿ ಬೆಳೆ ಸಹ ಕೊಚ್ಚಿಕೊಂಡು ಹೋಗಿದೆ. ಇದೇ ರೀತಿ ಇಂದು ಮಳೆಯಾಗುವ ವಾತಾವರಣ ಸೃಷ್ಟಿಯಾಗಿದ್ದು, ಮತ್ತಷ್ಟು ಬೆಳೆಗೆ ನಷ್ಟವಾಗಲಿದೆ ಎಂದು ಕಂದಾಯ ಇಲಾಖೆ ಅಂದಾಜಿಸಿದೆ.
ದಟ್ಟ ಮಂಜು:
ವಿಜಯಪುರ ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಬೆಳಗ್ಗೆ ದಟ್ಟ ಮಂಜು ಕವಿದಿತ್ತು. ಇದರಿಂದ ಹಗಲಲ್ಲೇ ವಾಹನ ಸವಾರರು ಹೆಡ್ಲೈಟ್ ಹಾಕಿಕೊಂಡು ವಾಹನ ಓಡಿಸಬೇಕಾಯ್ತು. ಈ ರೀತಿಯ ಮಂಜಿನಿಂದ ತೋಟಗಾರಿಕೆ ಬೆಳೆಗೂ ವಿವಿಧ ರೋಗ ತಗುಲಿ ಭಾರೀ ನಷ್ಟವಾಗುವ ಆತಂಕ ಎದುರಾಗಿದೆ.