ವಿಜಯಪುರ :ಜಿಲ್ಲೆಯ ಇಂಡಿ ತಾಲೂಕಿನ ಹೋರ್ತಿ ಗ್ರಾಮದ ಮೂರಾರ್ಜಿ ದೇಸಾಯಿ ಬಾಲಕರ ವಸತಿ ಶಾಲೆಯ ಕೋವಿಡ್ ಸೆಂಟರ್ನಲ್ಲಿ ಸರಿಯಾಗಿ ಚಿಕಿತ್ಸೆ ಮತ್ತು ಆಹಾರ ಹಾಗೂ ಮೂಲ ಸೌಕರ್ಯಗಳನ್ನು ನೀಡುತ್ತಿಲ್ಲ, ಹೆಚ್ಚಿಗೆ ಏನಾದ್ರೂ ಕೇಳಿದ್ರೆ ಸಿಬ್ಬಂದಿ ಹೊಡೆಯುತ್ತಾರೆ ಅನ್ನೋ ಆರೋಪ ಕೇಳಿ ಬಂದಿದೆ.
ತಿಪ್ಪೆಗುಂಡಿಯಂತಿರುವ ಕೊರೊನಾ ಚಿಕಿತ್ಸಾ ಕೇಂದ್ರದಲ್ಲಿ ಸೋಂಕಿತರಿಗೆ ಸರಿಯಾಗಿ ಕುಡಿಯಲು ಶುದ್ಧ ನೀರಿಲ್ಲ, ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಅಲ್ಲದೆ ಸೋಂಕಿತರೇ ನಿತ್ಯ ತಾವು ಮಲಗುವ ಕೋಣೆ ಸ್ವಚ್ಛಗೊಳಿಸುತ್ತಿದ್ದಾರೆ. ಕಂಡ ಕಂಡಲ್ಲಿ ಸಿಗರೇಟ್, ಮದ್ಯದ ಪ್ಯಾಕೇಟ್ ಬೇಕಾಬಿಟ್ಟಿ ಎಸೆಯಲಾಗಿದೆ.
ಗ್ರಾಮದ ಹೊರಗೆ ಕೋವಿಡ್-19 ಸೆಂಟರ್ ಇರುವ ಕಾರಣ ಸರಿಯಾದ ವಿದ್ಯುತ್ ವ್ಯವಸ್ಥೆ ಇಲ್ಲ, ಹಲವು ದಿನ ರಾತ್ರಿ ವಿದ್ಯುತ್ ಇಲ್ಲದೇ ಸೊಳ್ಳೆ ಕಡಿಸಿಕೊಂಡು ಮಲಗ ಬೇಕಾಗಿದೆ. ಕೋಣೆ ತುಂಬೆಲ್ಲಾ ಕಸದ ರಾಶಿ ಬಿದ್ದಿದ್ದರೂ ಸಹ ಅದನ್ನು ಕ್ಲೀನ್ ಮಾಡುವ ಗೋಜಿಗೂ ಸಿಬ್ಬಂದಿ ಹೋಗಿಲ್ಲ.
ಕೊರೊನಾ ಜತೆ ಸಾಕಷ್ಟು ರೋಗಗಳು ಇಲ್ಲಿರುವರಲ್ಲಿದ್ದು ಅದಕ್ಕೂ ಸರಿಯಾಗಿ ಚಿಕಿತ್ಸಾ ವ್ಯವಸ್ಥೆ ಇಲ್ಲದಂತಾಗಿದೆ. ಮಳೆಗಾಲ ಕಾರಣ ಸ್ನಾನಕ್ಕೆ ಬೀಸಿ ನೀರು ಸಹ ಇಲ್ಲ. ಹೀಗಾಗಿ ಹಲವು ದಿನಗಳಿಂದ ಬಹುತೇಕ ರೋಗಿಗಳು ಸ್ನಾನವೇ ಮಾಡಿಲ್ಲ. ಸರಿಯಾಗಿ ಊಟದ ವ್ಯವಸ್ಥೆ ಸಹ ಇಲ್ಲ, ಕೇವಲ ಹಸಿಬಿಸಿ ಅನ್ನ-ಸಾಂಬರ ನೀಡುತ್ತಿದ್ದಾರೆ. ಅದು ಮನುಷ್ಯರು ತಿನ್ನುವ ಹಾಗಿರುವುದಿಲ್ಲ ಎಂದು ಸೋಂಕಿತರು ದೂರಿದ್ದಾರೆ.
ಜಿಲ್ಲಾಡಳಿತ ಹೇಳೋದೆ ಬೇರೆ :ಕೆಲ ಸೋಂಕಿತರು ಅನಾವಶ್ಯಕವಾಗಿ ಜಗಳ ತೆಗೆಯುತ್ತಾರೆ. ನೆಗೆಟಿವ್ ಬಂದವರಿಗೆ ಮನೆಗೆ ಹೋಗಲು ಸೂಚಿಸಿದ್ರೂ ಹೋಗುವುದಿಲ್ಲ ಎಂದು ಕಿರಿಕಿರಿ ಮಾಡುತ್ತಾರೆ. ನೆಗಟಿವ್ ವರದಿ ನೀಡಿ ಎಂದು ಕೆಲವರು ಸಿಬ್ಬಂದಿಯನ್ನು ಪೀಡಿಸುತ್ತಾರೆ. ಅಂಥವರ ಒತ್ತಡಕ್ಕೆ ಮಣಿಯಲು ಸಾಧ್ಯವಿಲ್ಲ. ಸದ್ಯ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ ಎನ್ನುತ್ತಿದ್ದಾರೆ.
ಆದರೆ, ಸೋಂಕಿತರು ಗುಣಮುಖವಾಗುವವರೆಗೂ ಕೋವಿಡ್-19 ಸೆಂಟರ್ನಲ್ಲಿ ಉತ್ತಮ ಸೌಲಭ್ಯ ನೀಡಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ. ತಕ್ಷಣ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಅವ್ಯವಸ್ಥೆಯ ಆಗರವಾಗಿರುವ ಕೇಂದ್ರಕ್ಕೆ ಸೂಕ್ತ ಸೌಲಭ್ಯ ನೀಡಬೇಕು ಎನ್ನುವುದು ಸೋಂಕಿತರ ಆಗ್ರಹ.