ವಿಜಯಪುರ:ಜಿಲ್ಲಾ ಬಿಜೆಪಿಯಲ್ಲಿ ಇನ್ನೂ ಭಿನ್ನಮತದ ಹೊಗೆ ತಣ್ಣಗಾಗಿಲ್ಲ ಎನ್ನುವುದು ಮಹಾನಗರ ಪಾಲಿಕೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನವಾದ ಕಾರಣ ಕಳೆದ ರಾತ್ರಿ ಬಿಜೆಪಿಯ ಮುಖಂಡರ ಗುಪ್ತ ಸಭೆಗಳು ನಡೆಯುತ್ತಲೇ ಇದ್ದವು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಸಂಸದ ರಮೇಶ ಜಿಗಜಿಣಗಿ ಹಾಗೂ ಸಚಿವ ಗೋವಿಂದ ಕಾರಜೋಳ ತಮ್ಮ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಲು ಹಗ್ಗ ಜಗ್ಗಾಟ ನಡೆಸಿದ್ದಾರೆ. ಚುನಾವಣೆ ವೀಕ್ಷಕರಾಗಿ ಬಂದಿದ್ದ ಶಾಸಕ ಅಭಯ್ ಪಾಟೀಲ ಹಾಗೂ ಪಿ.ರಾಜೀವ ಎದುರು ನಾಯಕರು ಪರಸ್ಪರ ಮಾತಿನ ಚಕಮಕಿ ಸಹ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಾಯಕರ ವಾಕ್ಸಮರದಿಂದ ಬೇಸತ್ತ ವಿಜಯಪುರ ಜಿಲ್ಲಾಧ್ಯಕ್ಷರು ಟಿಕೆಟ್ ಪಡೆದವರನ್ನು ಖಾಸಗಿ ಹೋಟೆಲ್ಗೆ ಕರೆಯಿಸಿ ಬಿ ಫಾರ್ಮ್ ನೀಡಿದ್ದಾರೆ. ಅಭ್ಯರ್ಥಿಗಳು ಸಹ ತಾವು ಬಿ ಫಾರ್ಮ್ ಪಡೆಯುತ್ತಿರುವ ಪೋಟೋಗಳನ್ನು ಸಾಮಾಜಿಕ ತಾಣದಲ್ಲಿ ಹಾಕಿರುವುದು ಟಿಕೆಟ್ ತಪ್ಪಿರುವ ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಹಲವು ಅಭ್ಯರ್ಥಿಗಳು ಬಿಜೆಪಿಯಿಂದ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದಾರೆ.
ಅಭ್ಯರ್ಥಿಗಳ ಒತ್ತಡಕ್ಕೆ ಮಣಿದ ಬಿಜೆಪಿ ಜಿಲ್ಲಾಧ್ಯಕ್ಷರು ನಾಮಪತ್ರ ಸಲ್ಲಿಸಲು ಕೊನೆಯ ಒಂದು ಗಂಟೆ ಮುಂಚಿತವಾಗಿ ಟಿಕೆಟ್ ಘೋಷಣೆ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಪಟ್ಟಿ ಈ ರೀತಿಯಾಗಿದೆ.
ಪ್ರಭು ಸಂಗಪ್ಪ ಕೆಂಗಾರ, ರಾಹುಲ್ ಔರಂಗಬಾದ್, ಸುನೀತಾ ಒಡೆಯರ, ಮಡಿವಾಳಪ್ಪ ಕರಡಿ, ಮಳನಗೌಡ ಪಾಟೀಲ, ರಾಹುಲ್ ಜಾಧವ, ಪರಶುರಾಮ ರಜಪೂತ, ರಾಜು ಮಗಿಮಠ, ಸುನಂದಾ ಕುಮಸೆ, ವಿಠ್ಠಲ ಹೊಸಪೇಟೆ, ಸವಿತಾ ದೇವಗಿರಿ, ಜವಹಾರ ಗೋಸಾವಿ, ಸ್ವಪ್ನಾ ಕಣಮುಚನಾಳ, ರಮಾಬಾಯಿ ರಜಪೂತ, ಶ್ರೀದೇವಿ ಲೋಗಾವಿ, ರೇಣುಕಾ ಹಂಚನಾಳ, ಮಲ್ಲಿಕಾರ್ಜುನ ಗಡಗಿ, ಪ್ರೇಮಾನಂದ ಬಿರಾದಾರ, ಗೂಳಪ್ಪ ಶೆಟಗಾರ, ರಾಜೇಶ್ವರಿ ಹಂಜಿ, ಲಕ್ಷ್ಮೀ ದಾಶ್ಯಾಳ, ಕಿರಣ ಪಾಟೀಲ, ವಿಜಯಕುಮಾರ ಬಿರಾದಾರ, ವಿಜಯಕುಮಾರ ಗಚ್ಚಿನಕಟ್ಟಿ, ರಾಧಾ ತಾವರಗೇರಿ, ಶಿವರುದ್ರ ಬಾಗಲಕೋಟ, ವಿಠ್ಠಲ ನಡುವಿನಕೇರಿ, ರಾಜಶೇಖರ ಕುರಿಯವರ
ವಾರ್ಡ್ 4, 12, 18, 20, 27, 28, 34 ನಂ ಟಿಕೆಟ್ ಹಂಚಿಕೆ ಮಾಡದೇ ಕೊನೆ ಘಳಿಗೆಯಲ್ಲಿ ಅಭ್ಯರ್ಥಿಗಳನ್ನು ನಾಮಪತ್ರ ಸಲ್ಲಿಸಲು ಹೋದಾಗಲೇ ಅವರಿಗೆ ಗುಪ್ತವಾಗಿ ಬಿ ಫಾರ್ಮ್ ನೀಡುವ ಯೋಜನೆಯನ್ನು ಬಿಜೆಪಿಯ ಹಿರಿಯ ಮುಖಂಡರು ಹಾಕಿಕೊಂಡಿದ್ದಾರೆ. ಒಟ್ಟಾರೆ ಬಿಜೆಪಿಯಲ್ಲಿ ಹೆಚ್ಚಿದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹಾಗೂ ಪಕ್ಷದ ಹಿರಿಯ ಮುಖಂಡರ ಮುಸುಕಿನ ಗುದ್ದಾಟ ಟಿಕೆಟ್ ಹಂಚಿಕೆಯಲ್ಲಿ ವೀಕ್ಷಕರ ಬೆವರು ಇಳಿಸುವಂತೆ ಮಾಡಿದೆ.
ಇದನ್ನೂ ಓದಿ:ಕಾಂಗ್ರೆಸ್ & ಜೆಡಿಎಸ್ ತೆಕ್ಕೆಯಲ್ಲಿರುವ 100 ಕ್ಷೇತ್ರ ಗೆಲ್ಲಲು ಬಿಜೆಪಿ ತಯಾರಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ