ವಿಜಯಪುರ:ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಶಿಕ್ಷಕ ದಂಪತಿ ಚಂದ್ರಶೇಖರ ಹೊನ್ನಳ್ಳಿ ಹಾಗೂ ಅರುಣಾ ಎಂಬುವರ ಪುತ್ರ ರಾಕೇಶ ಕುಮಾರ ಇತ್ತೀಚೆಗೆ ನಡೆದ ಐಐಟಿ ಪ್ರವೇಶಾತಿ ಪರೀಕ್ಷೆ ಉತ್ತಮ ಅಂಕ ಪಡೆದಿದ್ದು, ದೆಹಲಿಯಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ರಾಕೇಶ ಕುಮಾರ ವಿಜಯಪುರ ನಗರದ ಪ್ರತಿಷ್ಠಿತ ರವೀಂದ್ರನಾಥ ಠಾಗೋರ್ ವಿಜ್ಞಾನ ಕಾಲೇಜಿನಲ್ಲಿ ಪಿಯುಸಿಯಲ್ಲಿ ಶೇ. 94 ಅಂಕ ಪಡೆದು ರ‍್ಯಾಂಕ್ ಬಂದಿದ್ದ. ಬಳಿಕ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಶೇ.99.6 ಅಂಕ ಪಡೆದು ಅಡ್ವಾನ್ಸ್ (ಐಐಟಿ ಪ್ರವೇಶಾತಿ ಪರೀಕ್ಷೆ)ಯಲ್ಲಿ ಓಬಿಸಿ ಆಲ್ ಇಂಡಿಯಾ ರ್ಯಾಂಕಿಂಗ್ನಲ್ಲಿ 890ನೇ ರ‍್ಯಾಂಕ್ ಪಡೆದಿದ್ದಾನೆ.
ಐಐಟಿ ಪ್ರವೇಶಾತಿ ಪರೀಕ್ಷೆ: ರ‍್ಯಾಂಕ್ ಪಡೆದ ವಿಜಯಪುರದ ವಿದ್ಯಾರ್ಥಿಗೆ ಸನ್ಮಾನ ಇಂತಹ ಸಾಧಕ ವಿದ್ಯಾರ್ಥಿಯನ್ನು ಛತ್ರಪತಿ ಶಿವಾಜಿ ಮಹಾರಾಜ ಎಜ್ಯುಕೇಷನ್ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ವಿದ್ಯಾರ್ಥಿ ರಾಕೇಶ ಕುಮಾರ ತಾನು ಪ್ರತಿದಿನ 8 ರಿಂದ 10 ಘಂಟೆ ಅಭ್ಯಾಸ ಮಾಡುತ್ತಿದ್ದೆ. ತಂದೆ ತಾಯಿ ಹಾಗೂ ರವೀಂದ್ರನಾಥ ಠಾಗೋರ್ ಕಾಲೇಜಿನ ಉಪನ್ಯಾಸಕರ ನಿರಂತರ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ ಎಂದರು. ತಮ್ಮ ಮಗನ ಸಾಧನೆ ಕುರಿತು ತಂದೆ ಚಂದ್ರಶೇಖರ ಶ್ಲಾಘನೆ ವ್ಯಕ್ತಪಡಿಸಿ ನನ್ನ ಮಗನ ಸಾಧನೆ ನಮ್ಮ ಕುಟುಂಬಕ್ಕೆ ಸಂತಸ ತಂದಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಶಿವಾಜಿ ಗಾಯಕವಾಡ ಮಾತನಾಡಿ, ಕಾಲೇಜಿನ ವಿದ್ಯಾರ್ಥಿ ರಾಕೇಶ ಕುಮಾರ ಸಾಧನೆ ಬಹಳ ಸಂತಸ ತಂದಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿ ಸಾಧನೆ ಮಾಡಿರುವುದು ನಮ್ಮ ಕಾಲೇಜಿನ ಉಪನ್ಯಾಸಕರ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಕೇಶ ಕುಮಾರ ಸಾಧನೆ ನಮ್ಮೆಲ್ಲರಿಗೂ ಪ್ರೇರಣೆ ಎಂದರು.
ಇದನ್ನೂ ಓದಿ:ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಗೌರೀಶ ಕಜಂಪಾಡಿಗೆ 4273ನೇ ರ‍್ಯಾಂಕ್